

ವಿಜಯಪುರ : ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಸಿ ಮತ್ತು ಡಿ ಗ್ರೂಪ್ ನೌಕರರೆಂದು ಸರ್ಕಾರ ಘೋಷಣೆ ಮಾಡಬೇಕು ಎಂದು ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದ ಸದಸ್ಯೆ ಎಂ.ಉಮಾದೇವಿ ಒತ್ತಾಯಿಸಿದರು.
ಸರ್ಕಾರಿ ನೌಕರರಿಗೆ ಸಿಗುತ್ತಿರುವ ಜೀವನ ಯೋಗ್ಯ ಮಾಸಿಕ ವೇತನ, ಸುಭದ್ರ ವಿಶ್ರಾಂತ ಜೀವನ, ನಿವೃತ್ತಿ ಪಿಂಚಣಿ ಸಹಿತ ಯಾವ ಸೌಕರ್ಯಗಳೂ ಅವರಿಗೆ ಸಿಗುತ್ತಿಲ್ಲ. ಯೋಜನೆ ಆರಂಭವಾಗಿ 46 ವರ್ಷಗಳು ಕಳೆದರೂ ಅತ್ಯಂತ ಕಡಿಮೆ ಗೌರವಧನದಲ್ಲೇ ದುಡಿಯುವಂತಾಗಿದೆ. ದಿನನಿತ್ಯವೂ ಎಲ್ಲಾ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಾಗುತ್ತಿವೆ. ಸರ್ಕಾರ ಈಗ ನೀಡುತ್ತಿರುವ ಕಡಿಮೆ ಗೌರವಧನವು ಈ ನೌಕರರ ಕುಟುಂಬ ನಿರ್ವಹಣೆಗೆ ಸಾಕಾಗುತ್ತಿಲ್ಲ. ಆದ್ದರಿಂದ ಅವರ ಕುಟುಂಬಗಳು ತೀವ್ರವಾದ ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿವೆ ಎಂದು ಶನಿವಾರ ವಿಜಯಪುರ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ದುಡಿಮೆಗೆ ತಕ್ಕನಾಗಿ ಸರ್ಕಾರಿ ನೌಕರರ ಸ್ಥಾನಮಾನ ಮತ್ತು ಜೀವನಯೋಗ್ಯ ಮಾಸಿಕ ವೇತನ ಸಹಿತ ವಿವಿಧ ಸೌಕರ್ಯಗಳು ದೊರಕಬೇಕಾಗಿದೆ. ಅದಕ್ಕಾಗಿ ರಾಜ್ಯಸರ್ಕಾರ ಅವರನ್ನು ಸಿ ಮತ್ತು ಡಿ ದರ್ಜೆಯ ನೌಕರರೆಂದು ಘೋಷಿಸಬೇಕು. ಇಲ್ಲದಿದ್ದರೆ ಆ ದರ್ಜೆಯ ಸರ್ಕಾರಿ ನೌಕರರ ಸರಿಸಮನಾಗಿ ವೇತನ ನೀಡಬೇಕು. ಇಲ್ಲವೇ ಕಾರ್ಯಕರ್ತೆಗೆ 25 ಸಾವಿರ ರೂ. ಮತ್ತು ಸಹಾಯಕಿಗೆ 21 ಸಾವಿರ ರೂ. ಗೌರವಧನವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಕಾರ್ಮಿಕ ಕಾಯ್ದೆ ಪ್ರಕಾರ ಕನಿಷ್ಟ ವೇತನ, ರಜೆ, ಇಪಿಎ್, ಇಎಸ್‌ಐ ಸಹಿತ ಕಾರ್ಮಿಕರಿಗೆ ಶಾಸನಬದ್ಧವಾಗಿ ಲಭಿಸುತ್ತಿರುವ ಎಲ್ಲ ಸೌಕರ್ಯಗಳನ್ನು ನೀಡಬೇಕು ಎಂದು ತಿಳಿಸಿದರು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಅಂಗನವಾಡಿ ನೌಕರರ ಮೂಲ ಬೇಡಿಕೆಗಳ ಕುರಿತು ದಶಕಗಳಿಂದಲೂ ದಿವ್ಯ ನಿರ್ಲಕ್ಷೃ ಧೋರಣೆ ಪ್ರದರ್ಶನ ಮಾಡಿಕೊಂಡು ಬಂದಿರುವುದನ್ನು ನೋಡುತ್ತಿದ್ದೇವೆ. ಅಂಗನವಾಡಿ ನೌಕರರ ಸಮಸ್ಯೆಗಳನ್ನು ಪರಿಹರಿಕೊಳ್ಳಲು ನಡೆಸಬೇಕಾದ ಮುಂದಿನ ಹೋರಾಟದ ರೂಪುರೇಷೆಗಳನ್ನು ಹಾಕಿಕೊಳ್ಳುವುದಕ್ಕಾಗಿ ವಿಜಯಪುರದಲ್ಲಿ ಅಂಗನವಾಡಿ ನೌಕರರ ರಾಜ್ಯ ಸಮ್ಮೇಳನವನ್ನು ಸಂಘಟಿಸಲು ನಿರ್ಧರಿಸಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ ಸಮ್ಮೇಳನ ಯಶಸ್ವಿಗೊಳಿಸಬೇಕು ಎಂದರು.
ಎಐಯುಟಿಯುಸಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಚ್.ಟಿ., ಸವಿತಾ ತೇರದಾಳ, ಶೋಭಾ ಹಿರೇಕುರುಬರ, ಎಚ್.ಟಿ. ಭರತಕುಮಾರ ಉಪಸ್ಥಿತರಿದ್ದರು.