

ಗುತ್ತಿಗೆದಾರರೊಬ್ಬರಿಗೆ ಜಾತಿ ನಿಂದನೆ ಮಾಡಿ, ಕೊಲೆ ಬೆದರಿಕೆ ಹಾಕಿರುವ ಶಾಸಕ ಮುನಿರತ್ನ ಅವರ ಶಾಸಕ ಸ್ಥಾನ ರದ್ದುಗೊಳಿಸಿ ಬಿಜೆಪಿಯಿಂದ ಉಚ್ಚಾಟಿಸಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಪುರಭವನದ ಎದುರಿನ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಶಾಸಕ ಮುನಿರತ್ನ ತಮ್ಮ ಸ್ಥಾನಮಾನದ ಘನತೆ ಮರೆತು, ಬೀದಿ ರೌಡಿಯಂತೆ ಅಸಹ್ಯಕರವಾಗಿ ವರ್ತಿಸಿದ್ದಾರೆ. ವಿನಾಕಾರಣ ಒಕ್ಕಲಿಗ ಮಹಿಳೆಯರ ಬಗ್ಗೆ ಹೀನ ದೃಷ್ಟಿಯಿಂದ ಅಪಮಾನಿಸಿರುವುದಲ್ಲದೇ ದಲಿತ ವ್ಯಕ್ತಿಯ ಜಾತಿ ನಿಂದನೆ ಮಾಡಿರುವುದು ತೀವ್ರ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ ಮಾತನಾಡಿ, ದುರ್ನಡತೆಯ ಮುನಿರತ್ನ ಜನಪ್ರತಿನಿಧಿ ಸ್ಥಾನದಲ್ಲಿ ಮುಂದುವರೆಯುವ ಎಲ್ಲ ನೈತಿಕ ಅರ್ಹತೆಗಳನ್ನು ಕಳೆದುಕೊಂಡಿದ್ದಾರೆ. ಪ್ರಜಾಪ್ರಭುತ್ವದ ಸತ್‌ಸಂಪ್ರದಾಯಗಳಿಗೆ ಹೆಸರಾದ ಕರ್ನಾಟಕ ವಿಧಾನಸಭೆಯಲ್ಲಿ ಇಂತಹ ವ್ಯಕ್ತಿಗಳು ಕಳಂಕ ಎಂದು ಕಿಡಿಕಾರಿದರು.
ಹೀನ ನಡತೆಯ ವ್ಯಕ್ತಿಯನ್ನು ಸಭಾಧ್ಯಕ್ಷ ಯು.ಟಿ.ಖಾದರ್ ಯಾವ ರೀತಿಯಲ್ಲೂ ಕ್ಷಮಿಸಬಾರದು. ಒಂದು ವೇಳೆ ನೀವು ಕ್ಷಮಿಸಿದರೆ ಶಾಸಕರಾಗಿ ಮುಂದುವರೆಯಲು ಸಮ್ಮತಿಸಿದರೆ, ಭವಿಷ್ಯದ ದಿನಗಳಲ್ಲಿ ಆಯ್ಕೆಯಾಗುವ ರಾಜಕೀಯ ಅಪಾಯಗಳು ನಿರ್ಮಾಣವಾಗಲಿವೆ. ಮುನಿರತ್ನ ನಡೆಸಿರುವ ದುಷ್ಕೃತ್ಯಗಳ ವಿರುದ್ಧ ದಾಖಲಾಗಿರುವ ದೂರುಗಳ ಆಧಾರದ ಮೇಲೆ ಹಾಗೂ ಭುಗಿಲೆದ್ದಿರುವ ಸಾರ್ವಜನಿಕ ಆಕ್ರೋಶ, ಪ್ರತಿಭಟನೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಶಾಸಕ ಸ್ಥಾನ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಸಮಿತಿಯ ಜಿಲ್ಲಾ ಸಂಚಾಲಕ ಶಂಭುಲಿಂಗಸ್ವಾಮಿ, ಸಾಂಸ್ಕೃತಿಕ ವಿಭಾಗದ ಹೆಗ್ಗನೂರು ನಿಂಗರಾಜು, ಜಿಲ್ಲಾ ಖಜಾಂಚಿ ಬಿ.ಡಿ.ಶಿವಬುದ್ದಿ, ಮುಖಂಡರಾದ ಎಸ್.ರಾಜಣ್ಣ, ಮಹೇಶ, ಸೋಮಣ್ಣ, ಶಿವು, ರಾಮ್, ಸಾದಿಕ್, ಶೇಖರ್, ಕೃಷ್ಣ, ಶಿವಕುಮಾರ್, ಡಾ.ಟಿ.ಮಂಜು, ದಿಲೀಪ್, ಎನ್.ರಮೇಶ್ ಇತರರಿದ್ದರು.