

ಶಿವಮೊಗ್ಗ: ಎಲ್‌ಐಸಿ ಗ್ರಾಹಕರ ಪಾಲಿಸಿಗಳ ಮೇಲಿನ ಜಿಎಸ್‌ಟಿ ರದ್ದು ಮಾಡಬೇಕು ಎಂದು ಒತ್ತಾಯಿಸಿ ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಸಂಘದ ಶಿವಮೊಗ್ಗ ಘಟಕದ ಪ್ರಮುಖರು ಸೋಮವಾರ ಎಲ್‌ಐಸಿ ವಿಭಾಗೀಯ ಕಚೇರಿ ಎದುರು ಧರಣಿ ನಡೆಸಿದರು.
ಎಲ್‌ಐಸಿ ಇತ್ತೀಚೆಗೆ ವ್ಯವಹಾರದಲ್ಲಿ ಹಲವು ಬದಲಾವಣೆ ಮಾಡಿದೆ. ಇದು ಪ್ರತಿನಿಧಿಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಗ್ರಾಹಕರ ಪಾಲಿಸಿ ಮೇಲಿನ ಜಿಎಸ್‌ಟಿ ರದ್ದು ಮಾಡಬೇಕು. ಪಾಲಿಸಿಗಳ ಮೇಲಿನ ಬೋನಸ್ ಹೆಚ್ಚಿಸಬೇಕು. ಪ್ರವೇಶದ ವಯಸ್ಸನ್ನು 50 ರಿಂದ 55ಕ್ಕೆ ಹೆಚ್ಚಿಸಬೇಕು. ಕಮಿಷನ್ ಹಿಂಪಡೆಯುವಿಕೆ ಬಗ್ಗೆ ಕ್ರಮ ಕೈಗೊಳ್ಳಬೇಕು. ಪ್ರತಿನಿಧಿಗಳ ಕಮಿಷನ್ ಹಳೇ ಪದ್ಧತಿಯನ್ನೇ ಮುಂದುವರಿಸಬೇಕು. ಗ್ರಾೃಚುಟಿ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಈ ಎಲ್ಲ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದೇಶಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ಬೇಡಿಕೆಗಳು ಈಡೇರದಿದ್ದರೆ ದೆಹಲಿಯಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಎಚ್ಚರಿಸಿದರು.
ವಿಮಾ ಪ್ರತಿನಿಧಿಗಳ ಸಂಘದ ವಿಭಾಗೀಯ ಅಧ್ಯಕ್ಷ ಎ.ವೀರೇಶಪ್ಪ, ಪ್ರಮುಖರಾದ ಸತೀಶ್‌ಕುಮಾರ್, ರಘು, ಮಂಜುನಾಥ್, ಕೆ.ವಿ.ಕೇಶವಮೂರ್ತಿ, ಪಿ.ಕೆ.ನಾಗೇಶ್ ರಾವ್, ಈಶ್ವರ್, ಸುಧೀರ್ ನಾಯಕ್ ಇತರರಿದ್ದರು.