

ಬೆಂಗಳೂರು: ಬಿಜೆಪಿ ವರಿಷ್ಠರ ಭೇಟಿ ಲಪ್ರದವಾಗಿದೆ. ಹಾವೇರಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಮಗನಿಗೆ ಟಿಕೆಟ್ ಕೊಡಿ ಎಂಬ ಬೇಡಿಕೆ ಮಂಡಿಸಿದ್ದೇನೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿಯಾದ ವೇಳೆ ರಾಜ್ಯದ ಅನೇಕ ವಿಚಾರಗಳನ್ನು ಗಮನಕ್ಕೆ ತಂದಿರುವೆ. ಮಗನಿಗೆ ಟಿಕೆಟ್ ಕೊಡುವುದು, ಬಿಡುವುದು ಪಕ್ಷದ ಸಂಸದೀಯ ಮಂಡಳಿ, ಚುನಾವಣೆ ಸಮಿತಿ ವಿವೇಚನೆ ಬಿಟ್ಟದ್ದು ಎಂದರು.
ಮಗನಿಗೆ ಟಿಕೆಟ್ ಕೊಟ್ಟರೆ ಸಂತೋಷ. ಬೇರೆಯವರಿಗೆ ಟಿಕೆಟ್ ಕೊಟ್ಟರೂ ಪಕ್ಷಕ್ಕಾಗಿ ದುಡಿಯುವೆ. 28 ಕ್ಷೇತ್ರಗಳಲ್ಲಿ ಪಕ್ಷ ಗೆಲುವು ಸಾಧಿಸಬೇಕು ಎನ್ನುವುದು ನಮ್ಮ ಮುಂದಿರುವ ಏಕೈಕ ಗುರಿಯಾಗಿದೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.
ಪಕ್ಷಕ್ಕೆ ಬರಲು ಬಿಜೆಪಿಯಿಂದ ಸಾಲಾಗಿ ನಿಂತಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತರಹ ಶೋ ಆ್ ಮಾಡಲ್ಲ. ಬಿಜೆಪಿಯಿಂದ ಯಾರೆಲ್ಲ ಸಾಲುಗಟ್ಟಿ ನಿಂತಿದ್ದಾರೆ, ಸೇರಿದ್ದಾರೆ ಎಂದು ಈಗ ಹೇಳಲಿ ನೋಡೋಣವೆಂದು ಸವಾಲು ಹಾಕಿದರು.
ಬಿಜೆಪಿಗೆ ಸೇರಲು ಅನೇಕರು ತುದಿಗಾಲಲ್ಲಿ ನಿಂತಿದ್ದಾರೆ, ಸಂಪರ್ಕದಲ್ಲಿದ್ದಾರೆ ಎಂದು ಹೇಳುವುದಿಲ್ಲ. ನನ್ನ ಸಂಪರ್ಕದಲ್ಲಂತೂ ಯಾರೂ ಇಲ್ಲ, ಇದ್ದಿದ್ದರೆ ಅವರ ಹೆಸರು ಹೇಳುತ್ತಿದ್ದೆ ಎಂದು ಸ್ಪಷ್ಟಪಡಿಸಿದರು.
ಅಯೋಧ್ಯೆಯ ರಾಮನ ಜನ್ಮಭೂಮಿಯಲ್ಲಿ ರಾಮಮಂದಿರ ಕಟ್ಟುವೆವು ಎಂದು ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದೆವು. ಅದೀಗ ಸಾಕಾರಗೊಳ್ಳುತ್ತಿರುವ ಸಂಭ್ರಮ ದೇಶದೆಲ್ಲೆಡೆ ನೆಲೆಸಿದೆ.
ಸುದೀರ್ಘ ಕಾನೂನು ಹೋರಾಟದ ಬಳಿಕ ರಾಮ ಮಂದಿರದ ಪರವಾಗಿ ತೀರ್ಪು ಬಂದಿದ್ದು, ಮಂದಿರವೂ ನಿರ್ಮಾಣವಾಗಿದೆ. ಈ ವಿಷಯದಲ್ಲಿ ಬಿಜೆಪಿ ರಾಜಕಾರಣ ಮಾಡುವುದಿಲ್ಲ. ಕಾಂಗ್ರೆಸ್ ತರಹ ಮತ ಬ್ಯಾಂಕ್‌ಗೆ ಬಳಸಿಕೊಳ್ಳಲ್ಲವೆಂದು ಟೀಕಿಸಿದರು.
ರಾಮಮಂದಿರ ನಿರ್ಮಾಣಕ್ಕೆ ಕರಸೇವೆಯಿಂದ ಹಿಡಿದು ಈಗಿನ ಹಂತದವರೆಗೂ ಎಲ್ಲರೂ ಕೈ ಜೋಡಿಸಿದ್ದಾರೆ. ಅವರಲ್ಲಿ ದಲಿತ-ಬಲಿತವೆಂದು ವ್ಯತ್ಯಾಸ ಮಾಡುವುದಿಲ್ಲ. ಎಲ್ಲರೂ ಹಿಂದುಗಳು ಎನ್ನುವುದು ಪಕ್ಷದ ಭಾವನೆ, ನಿಲುವಾಗಿದೆ.
ಬಾಲರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮವನ್ನು ಪಕ್ಷ ಆಯೋಜಿಸುತ್ತಿಲ್ಲ. ಆದರೆ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಬಯಸುತ್ತಿದ್ದು, ಕಾಂಗ್ರೆಸ್ ರಾಜಕೀಯ ಪಕ್ಷವಾಗಿ ತನ್ನದೇ ಆದ ನಿಲುವು ತೆಗೆದುಕೊಂಡಿದೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.