

ಬೆಂಗಳೂರು ಹಲವಾರು ವರ್ಷಗಳಿಂದ ಇರುವ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆಗಳನ್ನು ಪರಿಶೀಲಿಸಿ ವರದಿ ನೀಡಲು ಶಾಲಾ ಶಿಕ್ಷಣ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ.
ಶಿಕ್ಷಕರ ಸಂಘದ ಪ್ರತಿನಿಧಿಗಳೊಂದಿಗೆ ಸಮಾಲೋಚಿಸಿ ಎಲ್ಲ ಅಂಶಗಳನ್ನು ನಿಯಮಾನುಸಾರ ಸಮಗ್ರವಾಗಿ ಪರಿಶೀಲಿಸಿ ಸೂಕ್ತ ಶಿಾರಸು ಹಾಗೂ ಸ್ಪಷ್ಟ ಅಭಿಪ್ರಾಯಗಳನ್ನು ಒಳಗೊಂಡ ಸಮಗ್ರ ವರದಿಯನ್ನು ಒಂದು ತಿಂಗಳೊಳಗೆ ನೀಡಲು ಸೂಚಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧೀನ ಕಾರ್ಯದರ್ಶಿ ನಡಾವಳಿ ಹೊರಡಿಸಿದ್ದಾರೆ.
ಸಮಿತಿ ಸದಸ್ಯರು:
ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಅಧ್ಯಕ್ಷರಾಗಿರುತ್ತಾರೆ. ಆರ್ಥಿಕ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು), ಕಾನೂನು ಇಲಾಖೆ ಪ್ರತಿನಿಧಿಗಳು ಸದಸ್ಯರಾಗಿರುತ್ತಾರೆ. ಪ್ರಾಥಮಿಕ ಶಿಕ್ಷಣ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.
ಶಿಕ್ಷಕರ ಸಂಘದ ಬೇಡಿಕೆಗಳು:
2017ರ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು 2016ಕ್ಕಿಂತ ಮೊದಲು ನೇಮಕಾತಿಯಾದವರಿಗೆ ಪೂರ್ವಾನ್ವಯಗೊಳಿಸದಿರುವುದು, ಪ್ರಾಥಮಿಕ ಶಾಲಾ ಸೇವಾ ನಿರತ ಶಿಕ್ಷಕರಿಗಾಗಿರುವ ಅನ್ಯಾಯವನ್ನು ಸರಿಪಡಿಸುವುದು ಹಾಗೂ ಪದವಿ ಪೂರೈಸಿದ ಶಿಕ್ಷಕರನ್ನು 6ರಿಂದ 8ನೇ ತರಗತಿಗೆ ಸೇವಾ ನಿರತ ಪದವೀಧರ ಶಿಕ್ಷಕರೆಂದು ಒಂದೇ ಬಾರಿ ನಾಮೀಕರಿಸುವುದು ಸೇರಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆಯು ಒತ್ತಾಯಿಸಿದೆ.
ಈ ಬೇಡಿಕೆಗಳ ಕುರಿತು ನಿಯಮಾನುಸಾರ ಕೂಲಂಕಷವಾಗಿ ಪರಿಶೀಲಿಸಿ ಬೇಡೆಕೆಗಳನ್ನು ಪರಿಶೀಲಿಸಲು ಪ್ರಸ್ತುತ ಅಸ್ತಿತ್ವದಲ್ಲಿರುವ ನಿಯಮಗಳಲ್ಲಿ ಅವಕಾಶವಿರುವ ಕುರಿತು ಹಾಗೂ ಇದರಿಂದ ಶೈಕ್ಷಣಿಕ ವ್ಯವಸ್ಥೆಯ ಮೇಲೆ ಉಂಟಾಗಬಹುದಾದ ಪರಿಣಾಮಗಳು ಮತ್ತು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಸಮಗ್ರವಾದ ವರದಿಯನ್ನು ನೀಡಲು ಸಮಿತಿ ರಚಿಸಲಾಗಿದೆ.