

ಹೊಸನಗರ: ಮಲೆನಾಡಿನ ಸುಸ್ಥಿರ ಅಭಿವೃದ್ಧಿಗೆ ವಿಶೇಷ ಯೋಜನೆ ಪ್ರಕಟಿಸಲು ಸರ್ಕಾರ ಮುಂದಾಗಬೇಕು ಎಂದು ಜೀವ ವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಆಗ್ರಹಿಸಿದರು.
ತಾಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಲೆನಾಡು ಕೃಷಿ, ತೋಟಗಾರಿಕೆ, ಅರಣ್ಯ, ಪಶು ಸಂಗೋಪನೆ, ಸುಸ್ಥಿರ ಅಭಿವೃದ್ಧಿ ಕುರಿತಾದ ಅಭಿಯಾನದ ಸಭೆಯಲ್ಲಿ ಮಾತನಾಡಿ, ಮಲೆನಾಡಿನ ಕೆರೆಗಳು-ಹಳ್ಳಗಳ ಸಂರಕ್ಷಣಾ ಯೋಜನೆ, ಸಾಂಬಾರು ಬೆಳೆಗಳು, ಜೇನು ಸಾಕಾಣಿಕೆ ಸೇರಿದಂತೆ ರಾಜ್ಯ ಬಜೆಟ್‌ನಲ್ಲಿ ಪ್ರತ್ಯೇಕ ಯೋಜನೆ ಪ್ರಕಟಿಸಬೇಕು ಎಂದು ತಿಳಿಸಿದರು.
ಸಾವಯವ ಕೃಷಿಕ ನಾಗೇಂದ್ರ ಸಾಗರ ಮಾತನಾಡಿ, ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಸರ್ಕಾರ ಸಾವಯವ ಗ್ರಾಮ ಯೋಜನೆ ಜಾರಿಗೊಳಿಸಬೇಕು. ಸಹಕಾರಿ ಸಂಸ್ಥೆಗಳು ಸಾವಯವ ಕೃಷಿ, ಜೇನು ಕೃಷಿಗೆ ಬೆಂಬಲ ನೀಡಬೇಕು ಎಂದರು.
ಜೀವ ವೈವಿಧ್ಯ ಮಂಡಳಿ ತಜ್ಞ ಸಮಿತಿ ಸದಸ್ಯ ಶ್ರೀಪಾದ ಬಿಚ್ಚುಗತ್ತಿ ಮಾತನಾಡಿ, ಮಲೆನಾಡಿನ ಕೆರೆಗಳ ರಕ್ಷಣೆ-ಅಭಿವೃದ್ಧಿಗೆ ಗ್ರಾಮ ಪಂಚಾಯಿತಿಗಳು ಇನ್ನಷ್ಟು ಮಹತ್ವ ನೀಡಬೇಕು. ಮಲೆನಾಡಿನ ಹಳ್ಳ-ಹೊಳೆಗಳು, ಸಣ್ಣ ಕೆರೆಗಳಿಗೆ ಜೀವ ತುಂಬುವ ಯೋಜನೆ ರೂಪಿಸಲು ಮನವಿ ಮಾಡಿದರು.
ಸಾವಯವ ಕೃಷಿ, ಕೃಷಿ, ಅರಣ್ಯ, ಜೇನು ಕೃಷಿ, ಸೋಲಾರ್, ಹನಿ ನೀರಾವರಿ, ಗ್ರಾಮ ನೈಸರ್ಗಿಕ ಭೂಮಿ ರಕ್ಷಣೆ ಸೇರಿ ಮಲೆನಾಡು ಅಭಿವೃದ್ಧಿ ಪ್ಯಾಕೇಜ್ ಘೋಷಣೆಗೆ ಒತ್ತಾಯಿಸಲು ರೈತರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಚರ್ಚಿಸಿದರು. ರಾಜ್ಯ ವೃಕ್ಷಲಕ್ಷ ಆಂದೋಲನ, ಪರ್ಯಾವರಣಿ, ಗ್ರಾಮಭಾರತಿ, ಸಾವಯವ ರೈತರ ಒಕ್ಕೂಟ, ಗ್ರಾಮ ಅರಣ್ಯ ಸಮಿತಿ, ರೈತರ ಸಹಕಾರಿ ಸಂಘ ಸಂಸ್ಥೆಗಳು ಸೇರಿದಂತೆ ಸುಸ್ಥಿರ ಅಭಿವೃದ್ಧಿ ಅಭಿಮಾನದ ನಿಯೋಗವು ತಾಪಂ ಅಧಿಕಾರಿಗಳು ಹಾಗೂ ಅರಣ್ಯ, ಕೃಷಿ, ತೋಟಗಾರಿಕಾ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿತು.
ಬಂದಗದ್ದೆ ರಾಧಾಕೃಷ್ಣ, ವೃಕ್ಷ ಲಕ್ಷ ಆಂದೋಲನದ ಸಂಚಾಲಕ ಕೆ.ವೆಂಕಟೇಶ, ಅರಣ್ಯ ಸಮಿತಿ ಆನೆಗೊಳಿ ಸುಬ್ಬರಾವ್, ಜಲ ಸಂರಕ್ಷಣಾ ಕಾರ್ಯಕರ್ತ ಚಕ್ರವಾಕ ಸುಬ್ರಹ್ಮಣ್ಯ, ಜೀವವೈವಿಧ್ಯ ಸಮಿತಿಯ ಸಂಪೆಕಟ್ಟೆ ಕುಮಾರ್, ಕೊಡಚಾದ್ರಿ ಸಹಕಾರ ಸಂಘದ ಅಧ್ಯಕ್ಷ ಗರ್ತಿಕೆರೆ ರಾಘವೇಂದ್ರ, ವೃಕ್ಷ ಆಂದೋಲನದ ಕೆ.ಪಿ.ಕೃಷ್ಣಮೂರ್ತಿ, ತಾಪಂ ಇಒ ನರೇಂದ್ರಕುಮಾರ್, ಸಹಾಯಕ ನಿರ್ದೇಶಕ ರಾಜೇಂದ್ರ ಕುಮಾರ್, ಎಸಿಎ್ ಮೋಹನ್ ಕುಮಾರ್, ಆರ್‌ಎ್ಒಗಳಾದ ಮೋಹನ್ ಕುಮಾರ್, ರಾಘವೇಂದ್ರ, ಉಪವಲಯ ಅರಣ್ಯಾಧಿಕಾರಿ ಮೋಹನ್ ಎಸ್.ದೊಡ್ಮನಿ, ಕೃಷಿ ಇಲಾಖೆ ಅಧಿಕಾರಿ ಅಭಿಷೇಕ್, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಪುಟ್ಟನಾಯಕ್, ಕಂದಾಯ ಇಲಾಖೆ ಶಿರಸ್ತೇದಾರ್ ಸುಧೀಂದ್ರ, ಬಾಣಿಗ ಸತೀಶ್, ತಾಪಂ ಸಿಬ್ಬಂದಿ ಹಾಜರಿದ್ದರು.