ಮಾಜಿ ಸಂಸದ ರಮೇಶ್ ಕತ್ತಿ ಬಂಧನಕ್ಕೆ ಆಗ್ರಹ

23-KGL-2,
ವಾಲ್ಮೀಕಿ ಸಮಾಜದ ಮುಖಂಡರನ್ನು ನಿಂದಿಸಿದ ಆರೋಪದ ಮೇಲೆ ಮಾಜಿ ಸಂಸದ ರಮೇಶ್ ಕತ್ತಿ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲು ಮಾಡಿ ತಕ್ಷಣವೇ ಬಂಧಿಸಬೇಕೆಂದು ನಾಯಕ ಸಮುದಾಯದ ಯಜಮಾನರು ಪೊಲೀಸರಿಗೆ ದೂರು ನೀಡಿ ಒತ್ತಾಯಿಸಿದರು. ತಾಲೂಕು ನಾಯಕ ಸಂಘದ ಅಧ್ಯಕ್ಷ ಜಗದೀಶ್ ನಾಯಕ, ಕಸಬಾ ಮನೆ ಯಜಮಾನರಾದ ಸುಂದರ್ ನಾಯಕ, ಕೊಪ್ಪಾಳಿ ಮಹದೇವ ನಾಯಕ, ಟೈಲರ್ ನಾಗರಾಜು, ಪಾಳ್ಯ ಕೃಷ್ಣ, ಕುನ್ನನಾಯಕ ಇತರರು ಇದ್ದರು.
Published on

ಕೊಳ್ಳೇಗಾಲ: ವಾಲ್ಮೀಕಿ ಸಮಾಜದ ಮುಖಂಡರನ್ನು ಸಾರ್ವಜನಿಕವಾಗಿ ನಿಂದಿಸಿರುವ ಮಾಜಿ ಸಂಸದ ರಮೇಶ್ ಕತ್ತಿ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲು ಮಾಡಿ ತಕ್ಷಣವೇ ಬಂಧಿಸಬೇಕು ಎಂದು ನಾಯಕ ಸಮುದಾಯದ ಯಜಮಾನರು ಪ್ರತಿಭಟನೆ ನಡೆಸಿದರು.

ಬುಧವಾರ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಮೆರವಣಿಗೆ ಮೂಲಕ ಪಟ್ಟಣ ಪೊಲೀಸ್ ಠಾಣೆಗೆ ತೆರಳಿ ರಮೇಶ್ ಕತ್ತಿ ವಿರುದ್ಧ ದೂರನ್ನು ಎಎಸ್‌ಐ ನಂಜುಂಡಸ್ವಾಮಿ ಅವರಿಗೆ ಸಲ್ಲಿಸಿದರು.

ಬೆಳಗಾವಿ ಜಿಲ್ಲೆಯ ಡಿಸಿಸಿ ಬ್ಯಾಂಕ್ ಚುನಾವಣೆ ಸಂದರ್ಭ ರಮೇಶ್ ಕತ್ತಿ ಉದ್ದೇಶಪೂರ್ವಕವಾಗಿ ಬೇಡ ಜನಾಂಗದವರ ವಿರುದ್ಧ ಅಶ್ಲೀಲ ಪದ ಬಳಸಿ ಸಮುದಾಯವನ್ನು ಅಪಮಾನಿಸಿದ್ದಾರೆ. ಇದು ಸಾಮಾಜಿಕ ಜಾಲತಾಣ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಬಿತ್ತರಗೊಂಡಿದ್ದು, ನಾಯಕ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ಆದ್ದರಿಂದ ರಮೇಶ್ ಕತ್ತಿ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ವಿರುದ್ಧ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ದೂರು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸುವ ಕುರಿತು ಪರಿಶೀಲಿಸುವುದಾಗಿ ತಿಳಿಸಿದರು. ಪ್ರತಿಭಟನೆಯಲ್ಲಿ ತಾಲೂಕು ನಾಯಕ ಸಂಘದ ಅಧ್ಯಕ್ಷ ಜಗದೀಶ್ ನಾಯಕ, ಕಸಬಾ ಮನೆ ಯಜಮಾನರಾದ ಸುಂದರ್ ನಾಯಕ, ಕೊಪ್ಪಾಳಿ ಮಹದೇವ ನಾಯಕ, ಟೈಲರ್ ನಾಗರಾಜು, ಪಾಳ್ಯ ಕೃಷ್ಣ, ಕುನ್ನನಾಯಕ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಸದಸ್ಯೆ ಕವಿತಾ, ಮುಡಿಗುಂಡ ನಾರಾಯಣ್ ಹಾಗೂ ನಾಯಕ ಜನಾಂಗದ ಮುಖಂಡರು, ಗಡಿಮನೆ, ಕಟ್ಟೆಮನೆ, ಕಸಬಾ ಮನೆ ಯಜ ಮಾನರು ಹಾಗೂ ಗ್ರಾಮಾಂತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net