

ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶದಂತೆ ಪರಿಶಿಷ್ಟ ಜಾತಿ ಮೀಸಲು ವರ್ಗೀಕರಣವಾಗಿದೆ. ಅದೇ ರೀತಿ ಪರಿಶಿಷ್ಟ ಪಂಗಡಗಳ ಮೀಸಲು ವರ್ಗೀಕರೀಸಬೇಕು ಆದಿವಾಸಿ ನಾಯಕರು ಆಗ್ರಹಿಸಿದ್ದಾರೆ.
ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹಾಗೂ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರಿಗೆ ಮುಖಂಡರ ನಿಯೋಗ ಗುರುವಾರ ಭೇಟಿಯಾಗಿ ಈ ಕುರಿತು ಮನವಿ ಸಲ್ಲಿಸಿದೆ.
ಇದಕ್ಕೂ ಮುನ್ನ ಶಾಸಕರ ಭವನದಲ್ಲಿ ವಿಧಾನ ಪರಿಷತ್ ಸದಸ್ಯ ಶಾಂತಾರಾಮ್ ಸಿದ್ಧಿ ಮತ್ತಿತರ ಮುಖಂಡರು ನೇತೃತ್ವದಲ್ಲಿ ಬುಡಕಟ್ಟು ಸಮುದಾಯಗಳು ಗುರುವಾರ ಸಭೆ ಸೇರಿ ಚರ್ಚಿಸಿದವು.
ಎಸ್‌ಸಿ ಜತೆಗೆ ಎಸ್‌ಟಿ ಮೀಸಲು ವರ್ಗೀಕರಣಕ್ಕೂ ಸುಪ್ರೀಂ ಕೋರ್ಟ್ ಆದೇಶಿಸಿದೆ. ಆದರೆ ರಾಜ್ಯ ಸರ್ಕಾರ ಎಸ್‌ಸಿಗೆ ಒಳಮೀಸಲಾತಿ ಕಲ್ಪಿಸಿ, ಎಸ್‌ಟಿ ಒಳಮೀಸಲಾತಿ ಕೈಬಿಟ್ಟಿದೆ. ಎಸ್ ಟಿಯಲ್ಲೂ ಮೀಸಲು ಸಂಕೀರ್ಣ, ಸಮಸ್ಯಾತ್ಮಕವಾಗಿದ್ದು, ವರ್ಗೀಕರಣದಿಂದ ಪರಿಹಾರ ಸಿಗಲಿದೆ ಎಂಬ ನಿಲುವು ತಳೆಯಿತು.
ಪರಿಶಿಷ್ಟ ಜಾತಿಗಳಿಗಿಂತ ಪರಿಶಿಷ್ಟ ಪಂಗಡದಲ್ಲಿ ಮೀಸಲಾತಿ ಜಾರಿಯಲ್ಲಿ ಸಮಸ್ಯೆ ಇದೆ . ಸಣ್ಣ ಬುಡಕಟ್ಟುಗಳು , ಸೂಕ್ಷ್ಮ ಬುಡಕಟ್ಟುಗಳು , ದುರ್ಬಲ ಬುಡಕಟ್ಟುಗಳು ಮತ್ತು ಪ್ರಬಲ ಸಮುದಾಯಗಳು ಒಂದೇ ತಟ್ಟೆಯಲ್ಲಿ ಉಣ್ಣುವಂತಾಗಿದೆ.
ಹೀಗಾಗಿ ಸರ್ಕಾರದ ಮೀಸಲಾತಿ ವ್ಯವಸ್ಥೆಯಿಂದ ಎಷ್ಟೋ ಬುಡಕಟ್ಟುಗಳು ದೂರವೇ ಉಳಿದಿವೆ . ಸರ್ಕಾರ ತುರ್ತು ಈ ಬಗ್ಗೆ ನಿಗಾ ವಹಿಸಿ ಖಮೀಸಲಾತಿಯ ವೈಜ್ಞಾನಿಕ ಹಂಚಿಕೆಗಾಗಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗ ರಚಿಸಬೇಕು ಎಂದು ಸಭೆ ಒತ್ತಾಯಿಸಿತು.
ಸಮಾನರು - ಅಸಮಾನರು ಒಂದೇ ಗುಂಪಿನಲ್ಲಿದ್ದರೆ ಮೀಸಲಾತಿ ಕೊನೆಯ ವ್ಯಕ್ತಿಗೆ ಮರೀಚಿಕೆಯಾಗುತ್ತದೆ ಎಂಬ ಸುಪ್ರೀಂಕೋರ್ಟ್ ತೀರ್ಪಿನ ಉಲ್ಲೇಖವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಸಭೆಯಲ್ಲಿ ಪ್ರಾಧ್ಯಾಪಕರಾದ ಸೋಲಿಗರ ಡಾ ಜಡೆಯೇ ಗೌಡ , ಡಾ.ಗಣೇಶ್ ಬೆಟ್ಟಕುರುಬ, ಮುಖಂಡರಾದ ಹಸಳರ ಮುತ್ತಪ್ಪ , ಕುಡಿಯರ ಮಿಟ್ಟು ರಂಜನ್ , ಶಿವರಾಜ್ ಯೆರವ , ರಾಜು ಇರುಳಿಗ , ಹಕ್ಕಿಪಿಕ್ಕಿ ಕಾಮರಾಜ್ , ತ್ಯಾಗರಾಜು , ಮರಾಟಿ ನಾಯ್ಕ ಸಮುದಾಯದ ಹೆಚ್ ವಿ ಚಂದ್ರಶೇಖರ್, ಎಸ್.ಎನ್ ಅಶೋಕ್, ಕೆ ಎಸ್ ಮಹೇಶ್, ಗೌಡ್ಲು ಚೇತನ್, ಎಮ್ ಸಿ ಯೋಗಿಶ್, ಸಾಮರಸ್ಯ ವೇದಿಕೆಯ ವಾದಿರಾಜ್, 12 ಜಿಲ್ಲೆಗಳ 30ಕ್ಕೂ ಹೆಚ್ಚು ನಾಯಕರು ಪಾಲ್ಗೊಂಡಿದ್ದರು.