ಶಾಲಾ ಗೇಣಿ ಜಮೀನು ಸಮಸ್ಯೆ ಪರಿಹಾರಕ್ಕೆ ಒತ್ತಾಯ

Kallur Megharaj
Published on

ಶಿವಮೊಗ್ಗ: ರಾಜ್ಯದಲ್ಲಿ ಭೂವಿದ್ಯಾದಾನದ ಶಾಲಾ ಜಮೀನುಗಳಲ್ಲಿ ಕಳೆದ 70 ವರ್ಷಗಳಿಂದ ಗೇಣಿ ಪದ್ಧತಿ ಪಾಲಿಸಿಕೊಂಡು ಬರಲಾಗುತ್ತಿದೆ. ಭೂಸುಧಾರಣಾ ಕಾಯ್ದೆ ಜಾರಿಯಾಗಿ 51 ವರ್ಷ ಕಳೆದರೂ ಶಾಲಾ ಗೇಣಿ ಜಮೀನು ಸಮಸ್ಯೆ ಬಗೆಹರಿದಿಲ್ಲ. ಕೂಡಲೇ ಈ ಸಮಸ್ಯೆ ಪರಿಹರಿಸಬೇಕೆಂದು ರಾಜ್ಯ ಭೂವಿದ್ಯಾದಾನದ ಶಾಲಾ ಜಮೀನು ಗೇಣಿ ರೈತರ ಹೋರಾಟ ಸಮಿತಿ ಅಧ್ಯಕ್ಷ ಕಲ್ಲೂರು ಮೇಘರಾಜ್ ಒತ್ತಾಯಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಈ ಸಮಸ್ಯೆ ಪರಿಹಾರಕ್ಕೆ ಕಿಂಚಿತ್ತೂ ಪ್ರಯತ್ನಿಸುತ್ತಿಲ್ಲ. ಗೇಣಿ ರೈತರ ಸಮಸ್ಯೆ ಪರಿಹರಿಸದ ಉಸ್ತುವಾರಿ ಸಚಿವರಿಗೆ ದೇವರಾಜ ಅರಸು ಜಯಂತಿಯಲ್ಲಿ ಭಾಗವಹಿಸುವ ಯಾವುದೇ ನೈತಿಕತೆಯಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಭೂವಿದ್ಯಾದಾನದ ಶಾಲಾ ಜಮೀನುಗಳ ಗೇಣಿ ಮಾಡುತ್ತಿರುವ ರೈತರಿಗೆ ಖಾತೆ ಮಾಡಿಕೊಡಬೇಕು. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಈ ಬಗ್ಗೆ ಕಾರ್ಯೋನ್ಮುಖರಾಗಬೇಕು. ಇಲ್ಲದಿದ್ದರೆ ಅವರ ವಿರುದ್ಧವೂ ಪ್ರತಿಭಟನೆ ನಡೆಸಲಾಗುವುದು. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೂ ದೂರು ನೀಡಲಾಗುವುದು ಎಂದು ಎಚ್ಚರಿಸಿದರು.

ಪ್ರಮುಖರಾದ ಜಿ.ಬಿ.ಜಯಣ್ಣ, ಪೂರ್ಣೇಶ್, ಜಗದೀಶ್, ಎಚ್.ಎಂ.ಸಂಗಯ್ಯ, ವೇದಾನಂದಗೌಡ, ಟಿ.ಬಿ.ಸೋಮಶೇಖರ್, ಶಂಕ್ರಾನಾಯ್ಕಾ, ಮೋಹನ, ಪರಮೇಶ್ವರಪ್ಪ, ಕೊಂಡಜ್ಜಿ ವಿನಯಕುಮಾರ್ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net