

ಕಿಕ್ಕೇರಿ: ಹೋಬಳಿಯ ಕಳ್ಳನಕೆರೆಯಲ್ಲಿ ಮೂಲ ಸೌಕರ್ಯಗಳ ಕೊರತೆ ಕಾಡುತ್ತಿದ್ದು, ರಸ್ತೆ ಕೆಸರುಗದ್ದೆಯಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ, ಗುರುವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಪ್ರಮುಖ ರಸ್ತೆಯಲ್ಲಿ ಗ್ರಾಮಸ್ಥರು ಗುರುವಾರ ಜಮಾಯಿಸಿ ವ್ಯವಸ್ಥೆ ವಿರುದ್ಧ ಹಿಡಿಶಾಪ ಹಾಕಿದರು. ಬಳಿಕ ಗ್ರಾಮದ ಮಹಿಳೆ ಮೈತ್ರಿ ಮಾತನಾಡಿ, ಗ್ರಾಮದಲ್ಲಿ ಪ್ರಮುಖ ರಸ್ತೆಗಳಿಲ್ಲ, ಮಕ್ಕಳನ್ನು ಶಾಲೆಗೆ ಕಳಿಸಲು ತುಂಬ ಸಮಸ್ಯೆಯಾಗಿದೆ, ಸಣ್ಣ ಮಳೆ ಬಂದರೂ ರಸ್ತೆ ಕೆಸರು ಗದ್ದೆಯಾಗಲಿದೆ. ಹಾಲು ಹಾಕಲು ಹೋಗುವಾಗ ಬಿದ್ದು ಕೈಕಾಲು ನೋವು ಮಾಡಿಕೊಂಡಿದ್ದೇವೆ ಎಂದರು.
ಸೂಕ್ತ ಚರಂಡಿ ವ್ಯವಸ್ಥೆ ಇಲ್ಲ, ಮತ ಕೇಳಲು ಬರುವ ಜನಪ್ರತಿನಿಧಿಗಳು ರಸ್ತೆ, ಮೂಲ ಸೌಕರ್ಯ ಕಲ್ಪಿಸಿಕೊಡುವ ಭರವಸೆ ನೀಡಿ ಹೋದವರು ಇತ್ತು ಸುಳಿದಿಲ್ಲ. ಕಿಕ್ಕೇರಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಬಂದು ಸಮಸ್ಯೆ ಪರಿಹರಿಸದಿದ್ದರೆ ಪಂಚಾಯಿತಿ ಎದುರು ಹಾಗೂ ತಾಲೂಕು ಪಂಚಾಯಿತಿ ಎದುರು ಪ್ರತಿಭಟನೆ ಮಾಡುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.
ಮುಖಂಡ ಕುಮಾರ್ ಮಾತನಾಡಿ, ನಮ್ಮೂರಿನ ಸಮಸ್ಯೆ ಪರಿಹರಿಸದಿದ್ದರೆ ನಮ್ಮೂರಿನ ಮತದಾನವನ್ನು ಬಹಿಷ್ಕಾರ ಮಾಡಲಾಗುವುದು ಎಂದು ಎಚ್ಚರಿಸಿದರು. ನಿವೃತ್ತ ಶಿಕ್ಷಕ ಕೆ.ಪಿ.ಗಂಗಾಧರ್, ಮುಖಂಡರಾದ ಅಂದಾನಿಗೌಡ, ಸತೀಶ್, ಸುರೇಶ್, ಕೆ.ಪಿ.ಪುಟ್ಟರಾಜು, ಕುಮಾರ್, ನಾಗೇಂದ್ರ, ಲೋಹಿತ್, ಕೆ.ವಿ.ಅಶೋಕ್, ಕೆ.ಬಿ.ನಿಂಗರಾಜು, ಉಮೇಶ್, ರಾಮಕೃಷ್ಣ, ಲೋಕೇಶ್, ನಾರಾಯಣ, ಸತೀಶ್, ರಾಮಕೃಷ್ಣ, ಪದ್ಮಾ ರಾಜು, ಸುನಿತಾ, ಶ್ವೇತಾ, ನಳಿನಿ, ಚಂದ್ರಮ್ಮ, ಇಂದ್ರಮ್ಮ, ಕುಮಾರಿ, ಗ್ರಾಮಸ್ಥರು ಮತ್ತಿತರರಿದ್ದರು.