

ಶಿವಮೊಗ್ಗ: ನಗರದ ವಿವಿಧ ಭಾಗಗಳಲ್ಲಿ ಭೂಗತ ಕೇಬಲ್ ಅಳವಡಿಕೆ ಕಾಮಗಾರಿ ಮುಕ್ತಾಯವಾಗಿದೆ. ಆದರೆ ಈ ಪ್ರದೇಶದಲ್ಲಿ ಅಳವಡಿಸಿದ್ದ ವಿದ್ಯುತ್ ಕಂಬಗಳನ್ನು ಇನ್ನೂ ತೆರವು ಮಾಡಿಲ್ಲ. ಈ ಕಂಬಗಳನ್ನು ಕೂಡಲೇ ತೆರವುಗೊಳಿಸಬೇಕೆಂದು ಆಗ್ರಹಿಸಿ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪ್ರಮುಖರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರದ 80 ಕೋಟಿ ರೂ. ಅನುದಾನದ ಜತೆಗೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸುಮಾರು 200 ಕೋಟಿ ರೂ. ವ್ಯಯ ಮಾಡಿ ಭೂಗತ ವಿದ್ಯುತ್ ಮಾರ್ಗಗಳನ್ನು ನಿರ್ಮಿಸಲಾಯಿತು. ಈ ಕಾಮಗಾರಿ ಮುಗಿದು ನಾಲ್ಕೈದು ವರ್ಷಗಳಾಗಿವೆ. ಈ ಮಾರ್ಗದಲ್ಲಿ ಬೀದಿ ದೀಪಗಳಿಗೆ ಇನ್ನೂ ಹಳೆಯ ಕಂಬಗಳನ್ನೇ ಬಳಸಲಾಗುತ್ತಿದೆ. ಇದನ್ನು ತೆರವು ಮಾಡಿಲ್ಲ. ಇದು ಅತ್ಯಂತ ಅವೈಜ್ಞಾನಿಕ ಎಂದು ಪ್ರತಿಭಟನಾಕಾರರು ಆಕ್ಷೇಪ ವ್ಯಕ್ತಪಡಿಸಿದರು.
ಈ ಸಂಬಂಧ ಮೆಸ್ಕಾಂ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೂಡಲೇ ಮೆಸ್ಕಾಂ ಹಾಗೂ ಪಾಲಿಕೆ ಅಧಿಕಾರಿಗಳ ಸಭೆ ನಡೆಸಬೇಕು. ಈ ಸಭೆ ಶಾಸಕರು ಹಾಗೂ ಲೋಕಸಭಾ ಸದಸ್ಯರ ಉಪಸ್ಥಿತಿಯಲ್ಲೇ ನಡೆಯಬೇಕು. ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಒಕ್ಕೂಟದ ಅಧ್ಯಕ್ಷ ಎಸ್.ಆರ್.ಗೋಪಾಲ್, ಪ್ರಧಾನ ಕಾರ್ಯದರ್ಶಿ ಕೆ.ವಿ. ವಸಂತಕುಮಾರ್, ಸಂಘಟನಾ ಕಾರ್ಯದರ್ಶಿ ಡಾ.ಎ. ಸತೀಶ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಎಸ್.ಬಿ.ಅಶೋಕ್ ಕುಮಾರ್, ಪ್ರಮುಖರಾದ ಎಚ್.ಎಂ.ರಂಗನಾಥ್, ಜನಮೇಜಿರಾವ್, ಸತೀಶ್ ಗಾಂಧಿ, ಸುಬ್ರಹ್ಮಣ್ಯ, ವಿನೋದ್ ಪೈ, ಸೀತಾರಾಂ ಮುಂತಾದವರು ಪಾಲ್ಗೊಂಡಿದ್ದರು.