

ಬೆಂಗಳೂರು: ರಾಹುಲ್ ಗಾಂಧಿಯವರ ನಡತೆ ಈ ದೇಶಕ್ಕೆ ಸರಿಹೊಂದುವುದಿಲ್ಲ. ಆದ್ದರಿಂದ ಅವರು ತಕ್ಷಣ ರಾಜೀನಾಮೆ ನೀಡಬೇಕೆಂದು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಾಧ್ಯಮಗಳ ಜತೆ ಮಂಗಳವಾರ ಮಾತನಾಡಿದ ಅವರು, ರಾಹುಲ್ ಗಾಂಧಿಯವರಿಂದ ಇಡೀ ದೇಶಕ್ಕೆ ಅಪಮಾನವಾಗುತ್ತಿದೆ. ಹೊರದೇಶಗಳಲ್ಲಿ ನಮ್ಮ ದೇಶದ ನಾಯಕತ್ವವನ್ನು ಕಂಡು ಬೇರೆಯವರು ನಮ್ಮನ್ನು ಅಣಕಿಸುವ ಕೆಲಸವಾಗುತ್ತಿದೆ. ಈ ರೀತಿ ನ್ಯಾಯಾಲಯದಿಂದ ಆದೇಶ ಬಂದಿದ್ದು, ಇವರಿಗೆ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ನೀಡಿ ಹೋಗಬೇಕಿತ್ತು ಎಂದರು.
ಕಾಂಗ್ರೆಸ್ ನಾಯಕರು ದೇಶದ ಸುಭದ್ರತೆಯನ್ನು ಪ್ರಶ್ನಿಸುತ್ತಿದ್ದಾರೆ. ದೇಶದ ಕಾನೂನು ಎಲ್ಲರಿಗೂ ಒಂದೇ. ಕಾನೂನಿನಡಿಯಲ್ಲಿ ನ್ಯಾಯಾಲಯಗಳು ನೀಡುವ ತೀರ್ಪುಗಳನ್ನೇ ಕಾಂಗ್ರೆಸ್ ಪ್ರಶ್ನಿಸುವಂತದ್ದು, ಎಷ್ಟು ಸರಿ?. ಇದು ಪ್ರಜಾಪ್ರಭುತ್ವ ವಿರೋಧಿ ಅಲ್ಲವೇ; ಸಂವಿಧಾನ ವಿರೋಧಿ ಅಲ್ಲವೇ? ಎಂದು ಕೇಳಿದರು.
ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ಅವರ ಬಗ್ಗೆ ಪುಂಖಾನುಪುಂಖ ಭಾಷಣ ಮಾಡುತ್ತೀರಿ. ಅವರು ನೀಡಿರುವ ಸಂವಿಧಾನಕ್ಕೆ ಗೌರವ ಕೊಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆಯೇ ? ಎಂದು ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದರು.
ಕಾಂಗ್ರೆಸ್ಸಿನ ಅನಿಸಿಕೆಗೆ ಪರವಾಗಿ ನ್ಯಾಯಾಲಯಗಳಲ್ಲಿ ಆದೇಶ ಬಂದರೆ ಪ್ರಜಾಪ್ರಭುತ್ವಕ್ಕೆ ಶಕ್ತಿ ಬಂದಂತೆ; ನ್ಯಾಯಾಂಗವನ್ನು ಎತ್ತಿ ಹಿಡಿದಂತೆ ಎಂದು ಹೇಳುತ್ತಾರೆ. ಆದೇಶ ಇವರ ಮನಸ್ಥಿತಿಗೆ ವಿರುದ್ಧವಾಗಿ ಬಂದರೆ ಪ್ರಜಾಪ್ರಭುತ್ವ, ಸಂವಿಧಾನ ನಾಶವಾದಂತೆ ಎಂದು ಹೇಳುತ್ತಾರೆ. ಇಂತಹ ದ್ವಂದ್ವ ರಾಜಕೀಯ ಕಾಂಗ್ರೆಸ್ಸಿನವರು ಮಾತ್ರ ಮಾಡುವುದಕ್ಕೆ ಸಾಧ್ಯ; ಬೇರೆ ಯಾರೂ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಟೀಕಿಸಿದರು.
ಮತಗಳ್ಳತ ಸಾಬೀತಾಗಿದೆ ಎಂಬ ನ್ಯಾಯಾಲಯದ ಆದೇಶವನ್ನೇ ಧಿಕ್ಕರಿಸಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ ಪರಂಪರೆ ಕಾಂಗ್ರೆಸ್ಸಿನದು. ಇಂದು ಅದೇ ರೀತಿಯ ಸುಳ್ಳುಗಳನ್ನು ಹೇಳಿಕೊಂಡು ಒಂದು ರೀತಿಯ ನಕಾರಾತ್ಮಕ ರಾಜಕೀಯ ಮಾಡಿ ಜನರನ್ನು ದಾರಿ ತಪ್ಪಿಸಿ ದೇಶಕ್ಕೆ ಕೆಟ್ಟು ಹೆಸರನ್ನು ತರುವಂತಹ ಕೆಲಸವನ್ನು ರಾಹುಲ್ ಗಾಂಧಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮೈಸೂರಿನ ಮಹಾರಾಜರು ಹಿಂದಿನ ಕಾಲಾವಧಿಯಲ್ಲಿ ಯಾರು ಕರ್ನಾಟಕದ ಪಕ್ಕ ಇರುತ್ತಾರೆ ಮತ್ತು ಯಾರು ವಲಸೆ ಬಂದಿದ್ದಾರೆ ಎನ್ನುವುದನ್ನು ಗುರುತಿಸುವುದಕ್ಕೆ ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಇವುಗಳು ಜಾತಿಗಳಲ್ಲಿ ಜಾತಿ ಸೂಚಕಗಳನ್ನಾಗಿ ಮಾಡಲು ಬಳಸಿದ ಪದ ಪ್ರಯೋಗಗಳು ಎಂದು ತಿಳಿಸಿದರು.
ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಇವುಗಳು ಜಾತಿಗಳಾಗಿರಲಿಲ್ಲ. ಆದರೆ ಇತ್ತೀಚೆಗೆ ಬಹಳ ಸಂಘಟನೆಗಳು ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಇವುಗಳನ್ನು ಗುರುತಿಸಬಾರದು; ಅದನ್ನು ತೆಗೆಯಬೇಕು ಎಂದು ಮನವಿ ಮಾಡಿದ್ದರು ಹಾಗೂ ಆ ಜನಾಂಗಳನ್ನು ಕೂಡ ಮೂಲ ಜಾತಿಗಳಲ್ಲಿ ಸೇರ್ಪಡೆ ಮಾಡಬೇಕು ಎಂದು ಬೇಡಿಕೆಯನ್ನು ಇಟ್ಟಿದ್ದರು.
ಆದರೆ ಆಯೋಗದ ವರದಿಯಲ್ಲಿ ಏನು ಇದೆ ಎಂಬುದು ಯಾರಿಗೂ ತಿಳಿದಿಲ್ಲ. ಆಯೋಗದ ವರದಿಯನ್ನು ಸರ್ಕಾರ ತೆಗೆದುಕೊಂಡಿದೆ. ವರದಿಯ ಸಾಧಕ ಬಾಧಕಗಳನ್ನು ನೋಡಿ ತೀರ್ಮಾನ ಮಾಡುತ್ತೇವೆ ಎಂದು ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.