ಹೆಣ್ಣು ಮಕ್ಕಳಿಗೆ ರಕ್ಷಣೆ ಒದಗಿಸಲು ಆಗ್ರಹ

ÊÜ
ಸಾಮಾಜಿಕ ಭದ್ರತಾ ಯೋಜನೆಗಳ ಮಾಸಾಶನ ಹೆಚ್ಚಿಸಬೇಕು. ಎಂದು ಆಗ್ರಹಿಸಿ ಸಮೃದ್ ಸ್ವ-ಸಹಾಯ ಸಂಘಗಳ ಶಿವಮೊಗ್ಗ ತಾಲೂಕು ಒಕ್ಕೂಟದ ಕಾರ್ಯಕರ್ತೆಯರು ಜಿಲ್ಲಾಧಿಕಾರಿ ಕಚೇರಿ ಸಹಾಯಕ ಅಧಿಕಾರಿ ಚನ್ನಪ್ಪ ಅವರಿಗೆ ಮನವಿ ಸಲ್ಲಿಸಿದರು. ಎಂ.ಪಿ.ಶ್ವೇತಾ, ಗಂಗಾ, ಲಲಿತಮ್ಮ, ನಿಶ್ಚಿತಾ, ಚಂದ್ರಮ್ಮ, ನಾಗವೇಣಿ ಮುಂತಾದವರಿದ್ದರು.
Published on

ಶಿವಮೊಗ್ಗ: ವಿಧವಾ ವೇತನ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಮಾಸಾಶನವನ್ನು ಹೆಚ್ಚಿಸಬೇಕು. ಹೆಣ್ಣು ಮಕ್ಕಳಿಗೆ ರಕ್ಷಣೆ ಒದಗಿಸಬೇಕೆಂದು ಆಗ್ರಹಿಸಿ ಸಮೃದ್ ಸ್ವ-ಸಹಾಯ ಸಂಘಗಳ ಶಿವಮೊಗ್ಗ ತಾಲೂಕು ಒಕ್ಕೂಟದ ಕಾರ್ಯಕರ್ತೆಯರು ಮಂಗಳವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಸಹಾಯಕ ಅಧಿಕಾರಿ ಚನ್ನಪ್ಪ ಅವರಿಗೆ ಮನವಿ ಸಲ್ಲಿಸಿದರು.

ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವಿಕಲರ ಮಾಸಾಶನ ಸರಿಯಾದ ಸಮಯಕ್ಕೆ ಬಿಡುಗಡೆಯಾಗುತ್ತಿಲ್ಲ. ಈಗ ನೀಡಲಾಗುತ್ತಿರುವ ಮಾಸಾಶನವನ್ನು ಎರಡು ಸಾವಿರ ರೂ.ಗೆ ಹೆಚ್ಚಿಸಬೇಕು. ನಿತ್ಯ ಬಳಕೆ ವಸ್ತುಗಳ ಬೆಲೆ ಹೆಚ್ಚಾಗಿರುವುದರಿಂದ ಸರ್ಕಾರ ನೀಡುತ್ತಿರುವ ಮಾಸಾಶನ ಯಾವುದಕ್ಕೂ ಸಾಲದಾಗಿದೆ ಎಂದು ಅಳಲು ತೋಡಿಕೊಂಡರು.

ಮಹಿಳೆಯರು, ಮಕ್ಕಳ ಮೇಲೆ ದೌರ್ಜನ್ಯ, ಹಿಂಸಾಚಾರ, ಅತ್ಯಾಚಾರ, ಲೈಂಗಿಕ ಕಿರುಕುಳ, ಹತ್ಯೆ ಮುಂತಾದ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. ಇದೊಂದು ಭಯಾನಕ ಸಂಗತಿಯಾಗಿದೆ. ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಆತಂಕದ ಸನ್ನಿವೇಶದಲ್ಲಿ ಬದುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅತ್ಯಾಚಾರಿಗಳಿಗೆ ತಕ್ಕ ಶಿಕ್ಷೆಯೂ ಆಗುತ್ತಿಲ್ಲ. ತಪ್ಪೆಸಗಿದವರಿಗೆ ಕಠಿಣ ಶಿಕ್ಷೆಯಾಗುವ ಕಾನೂನು ವ್ಯವಸ್ಥೆ ನಿರ್ಮಾಣವಾಗಬೇಕೆಂದು ಆಗ್ರಹಿಸಿದರು.

ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲೆ ನಡೆದ ಅತ್ಯಾಚಾರ ಪ್ರಕರಣಗಳು ಬೇಗನೆ ಇತ್ಯರ್ಥವಾಗುವುದಿಲ್ಲ. ತಪ್ಪಿತಸ್ಥರು ಕಾನೂನಿನಿಂದ ತಪ್ಪಿಸಿಕೊಳ್ಳುವ ಅವಕಾಶಗಳು ಹೆಚ್ಚುತ್ತಿವೆ. ಅಂತವರಿಗೆ ಜಾಮೀನು ನಿರಾಕರಿಸಬೇಕು. ಜೀವಾವಧಿ ಶಿಕ್ಷೆ ಇಲ್ಲವೆ ಗಲ್ಲು ಶಿಕ್ಷೆ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.

ಒಕ್ಕೂಟದ ಅಧ್ಯಕ್ಷೆ ಎಂ.ಪಿ.ಶ್ವೇತಾ, ಪ್ರಮುಖರಾದ ನಿಶ್ಚಿತಾ, ಸರೋಜಾ, ನಾಗವೇಣಿ, ಗಂಗಾ, ವತ್ಸಲಾ, ಲಲಿತಮ್ಮ, ಚಂದ್ರಮ್ಮ, ವೇದಾವತಿ, ವಸಂತ ಕುಮಾರಿ, ಅನುಸೂಯ, ರೋಜಾ, ಭಾನುಪ್ರಿಯಾ, ಸಾಕಮ್ಮ, ನಸ್ರೀನ್, ಶಭಾನಾ, ಸಲ್ಮಾ ಪತಿಭಟನೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net