ಕಮಲ್ ಹಾಸನ್ ಬಂಧನಕ್ಕೆ ಒತ್ತಾಯ

karave
ಕಮಲ್ ಹಾಸನ್ ಬಂಧನಕ್ಕೆ ಅಗ್ರಹಿಸಿ ಕರವೇ ನಡೆಸಿದ ಪ್ರತಿಭಟನೆಯಲ್ಲಿ ಮಂಜುನಾಥ್ ಕೋಟ್ಯಾನ್, ಎನ್.ರಂಗನಾಥ್, ಮಂಜುನಾಥ್, ವೆಂಕಟೇಶ್ ಹೆಗ್ಡೆ, ಮಂಜುಳಾ ಇತರರಿದ್ದರು.
Published on

ಶಿವಮೊಗ್ಗ: ಕನ್ನಡ ಭಾಷೆ ತಮಿಳಿನಿಂದ ಜನಿಸಿದೆ ಎಂದು ಹೇಳುವ ಮೂಲಕ ನಟ ಕಮಲ್ ಹಾಸನ್ ಕನ್ನಡಿಗರ ಭಾವನೆಗಳಿಗೆ ನೋವುಂಟು ಮಾಡಿದ್ದು, ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬುಧವಾರ ಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಇತಿಹಾಸಕಾರನೂ ಅಲ್ಲದ, ಭಾಷಾ ತಜ್ಞನೂ ಅಲ್ಲದ ನಟ ಕನ್ನಡದ ಬಗ್ಗೆ ಸಲ್ಲದ ಹೇಳಿಕೆ ನೀಡಿದ್ದಾರೆ. ಆಡಿದ ತಪ್ಪು ಮಾತಿಗೆ ಕ್ಷಮೆ ಕೋರುವಂತೆ ಇಡೀ ರಾಜ್ಯದ ಜನರು ಆಗ್ರಹಿಸಿದರೂ ಉದ್ಧಟನ ಪ್ರದರ್ಶಿಸುತ್ತಿದ್ದಾರೆ. ಸಾಲದ್ದಕ್ಕೆ ತನ್ನ ಮಾತನ್ನು ಸಮರ್ಥಿಸಿಕೊಳ್ಳುವ ಅವರ ನಡೆ ಆಕ್ಷೇಪಾರ್ಹ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೈವಿಧ್ಯದಲ್ಲಿ ಏಕತೆ ಹೊಂದಿರುವ ನಮ್ಮ ದೇಶದಲ್ಲಿ ನೆಲ, ಜಲ, ಭಾಷೆ, ಅತ್ಯಂತ ಸೂಕ್ಷ್ಮ ವಿಚಾರವಾಗಿದೆ. ಈ ವಿಷಯ ಭಾವನಾತ್ಮಕವಾದುದು. ಯಾರೂ ಈ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡಬಾರದು. ಆದರೆ ಕಮಲ್ ಹಾಸನ್ ತನ್ನ ಸಿನಿಮಾ ಹಾಗೂ ರಾಜಕೀಯ ಲಾಭಕ್ಕಾಗಿ ಕನ್ನಡದ ಬಗ್ಗೆ ಸಲ್ಲದ ಮಾತನಾಡಿದ್ದಾರೆ ಎಂದು ದೂರಿದರು.

ಕರವೇ ರಾಜ್ಯ ಕಾರ್ಯದರ್ಶಿ ಮಂಜುನಾಥ್ ಎಸ್. ಕೋಟ್ಯಾನ್, ಜಿಲ್ಲಾ ಗೌರವಾಧ್ಯಕ್ಷ ನಿಂಬೆಹಣ್ಣು ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಎನ್.ರಂಗನಾಥ್, ಪ್ರಮುಖರಾದ ಲಿಂಗರಾಜ್, ಹರೀಶ್, ಎನ್.ಮಂಜುಳಾ, ಜಗನ್ನಾಥ್, ಸಂತೋಷ್, ಎಂ.ಆರ್. ವೆಂಕಟೇಶ್ ಹೆಗ್ಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net