ರಾಜ್ಯದ ಪಠ್ಯಕ್ರಮದಲ್ಲಿ ದ್ವಿಭಾಷಾ ನೀತಿ ಅಳವಡಿಕೆಗೆ ಒತ್ತಾಯ

All Karnataka Kannada Movement Central Committee
Published on

ಶಿವಮೊಗ್ಗ: ರಾಜ್ಯದ ಶಿಕ್ಷಣ ಪಠ್ಯಕ್ರಮದಲ್ಲಿ ದ್ವಿಭಾಷಾ ಪದ್ಧತಿ ಅಳವಡಿಕೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ನ.1ರ ಗಡುವು ನೀಡಲಾಗಿದೆ. ಅಷ್ಟರೊಳಗೆ ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿ ಅಧ್ಯಕ್ಷ ಗುರುದೇವ್ ನಾರಾಯಣಕುಮಾರ್ ಎಚ್ಚರಿಸಿದರು.

ರಾಜ್ಯದಲ್ಲಿ ಹಿಂದಿ ಹೇರಿಕೆಗೆ ಮುಂದಾಗಿರುವುದನ್ನು ತಪ್ಪಿಸಬೇಕಿದೆ. ದ್ವಿಭಾಷಾ ನೀತಿ ಮಾತ್ರ ಜಾರಿಯಲ್ಲಿರಬೇಕು ಎಂದು ನಿರಂತರವಾಗಿ ಹೋರಾಟ ಮಾಡುತ್ತಿದ್ದರೂ ಸರ್ಕಾರ ಇದೂವರೆಗೆ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದ ಮಕ್ಕಳು ಈಗಾಗಲೇ ಕನ್ನಡ ಮತ್ತು ಇಂಗ್ಲಿಷ್ ಕಲಿಯುತ್ತಿದ್ದಾರೆ. ಹಾಗಾಗಿ ಹಿಂದಿ ಕಡ್ಡಾಯವಾಗಿ ತೇರ್ಗೆಡೆಯಾಗಬೇಕು ಎಂಬ ನಿಯಮ ಸರಿಯಲ್ಲ. ಆದರೆ ಹಿಂದಿ ಭಾಷೆಯೇ ಗೊತ್ತಿಲ್ಲದ ಲಕ್ಷಾಂತರ ಮಕ್ಕಳು ಆ ಭಾಷೆಯಲ್ಲಿ ಅನುತ್ತೀರ್ಣರಾಗಿ ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸುತ್ತಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ದ್ವಿಭಾಷಾ ನೀತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ. ಹಾಗಾಗಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಬೇಕು. ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ತರಬೇಕು. ಬ್ಯಾಂಕಿಂಗ್ ಮತ್ತು ಖಾಸಗಿ ವಲಯಗಳಲ್ಲಿ ಕಡ್ಡಾಯವಾಗಿ ಕನ್ನಡದಲ್ಲೇ ಸೇವೆ ನೀಡಬೇಕೆಂದು ಆಗ್ರಹಿಸಿದರು. ಸಮಿತಿ ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷೆ ಅರ್ಚನಾ ನಿರಂಜನ್, ಮಾರುತಿ, ಪ್ರವೀಣ್, ಹರೀಶ್, ದರ್ಶನ್, ರವಿ ಸುದ್ದಿಗೋಷ್ಠಿಯಲ್ಲಿದ್ದರು.

1947ರ ಆಗಸ್ಟ್ ತಿಂಗಳಲ್ಲೇ ಅಂದಿನ ಮೈಸೂರು ದೇಶಕ್ಕೆ ತ್ಯಾಗ ಮಾಡಿರುವವರ ಸ್ಮರಣಾರ್ಥ ಮನೆ ಮನೆಗಳ ಮೇಲೆ ಕನ್ನಡ ಬಾವುಟ ಹಾರಿಸಲಾಗುತ್ತಿದೆ. ಈ ಬಾರಿ ಆ.9ರಂದು ಶಿವಮೊಗ್ಗ ಸೇರಿ ಜಿಲ್ಲಾಧ್ಯಂತ ಮನೆ ಮನೆಗಳಲ್ಲಿ ಕನ್ನಡ ಬಾವುಟ ಹಾರಿಸಲಾಗುವುದು. - ವಾಟಾಳ್ ಮಂಜುನಾಥ್, ಕನ್ನಡ ಚಳವಳಿ ಕೇಂದ್ರ ಸಮಿತಿ ಜಿಲ್ಲಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net