ದೇಶದ್ರೋಹಿಗಳ ವಿರುದ್ಧ ಎಪ್‌ಐಆರ್‌ಗೆ ಒತ್ತಾಯ

bjp
ಎಸ್.ಎನ್.ಚನ್ನಬಸಪ್ಪ, ಎಸ್.ದತ್ತಾತ್ರಿ, ಡಿ.ಮೋಹನ ರೆಡ್ಡಿ, ಸುರೇಖಾ ಮುರಳೀಧರ್ ಮುಂತಾದವರು ಪೊಲೀಸ್ ಠಾಣೆಗೆ ಭೇಟಿ ನೀಡಿ ಪಾಕ್ ಪರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಇಬ್ರಾಹಿಂ ಖಾನ್ ಬಂಧಿಸುವಂತೆ ಆಗ್ರಹಿಸಿದರು.
Published on

ಶಿವಮೊಗ್ಗ: ನಗರದಲ್ಲಿರುವ ದೇಶದ್ರೋಹಿಗಳ ವಿರುದ್ಧ ಎಪ್‌ಐಆರ್ ದಾಖಲಿಸಿ ಅವರನ್ನು ಮೇ 12ರ ಬೆಳಗ್ಗೆ 10ರೊಳಗೆ ಬಂಧಿಸುವಂತೆ ಪೊಲೀಸರಿಗೆ ಬಿಜೆಪಿ ಮುಖಂಡರು ಗಡುವು ನೀಡಿದ್ದಾರೆ.

ಪಾಕಿಸ್ತಾನದ ಪರ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಟ್ಯಾಂಕ್ ಮೊಹಲ್ಲಾದ ಇಬ್ರಾಹಿಂ ಖಾನ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಶಾಸಕ ಎಸ್.ಎನ್.ಚನ್ನಬಸಪ್ಪ ನೇತೃತ್ವದಲ್ಲಿ ಕೋಟೆ ಪೊಲೀಸ್ ಠಾಣೆಗೆ ಸೋಮವಾರ ಭೇಟಿ ನೀಡಿದ ಬಿಜೆಪಿ ನಿಯೋಗ ಸಿಪಿಐ ಹರೀಶ್ ಪಟೇಲ್ ಅವರೊಂದಿಗೆ ಚರ್ಚೆ ನಡೆಸಿತು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಎನ್.ಚನ್ನಬಸಪ್ಪ, ನಮ್ಮ ಸೇನೆ ದೇಶದ್ರೋಹಿಗಳನ್ನು ಗುರುತಿಸಿ ಕ್ರಮ ಕೈಗೊಳ್ಳುತ್ತಿದೆ. ಅವರ ಮನೆಗಳನು ಧ್ವಂಸ ಮಾಡಲಾಗುತ್ತಿದೆ. ಆದರೆ ಶಿವಮೊಗ್ಗ ಪೋಲಿಸರು ದೇಶದ್ರೋಹಿಗಳನ್ನು ಕರೆದು ವಿಚಾರಿಸಿ ಮನೆಗೆ ಕಳಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹಾತ್ಮಾ ಗಾಂಧಿ, ವೀರ ಸಾವರ್ಕರ್ ಮುಂತಾದ ಮಹನೀಯರು ಶಿವಮೊಗ್ಗಕ್ಕೆ ಬಂದು ಹೋಗಿದ್ದಾರೆ. ಇಂತಹ ನೆಲದಲ್ಲಿ ದೇಶದ್ರೋಹಿಗಳನ್ನು ಸುಮ್ಮನೇ ಬಿಡಲಾಗುತ್ತಿದೆ. ಕೋಟೆ ಪೋಲಿಸ್ ಠಾಣೆ, ತುಂಗಾ ನಗರ ಮತ್ತು ವಿದ್ಯಾನಗರ ಠಾಣೆಗಳಲ್ಲಿ ಪಾಕಿಸ್ತಾನ ಪರ ಅಭಿಪ್ರಾಯಗಳನ್ನು ಹಂಚಿಕೊಂಡವರ ವಿರುದ್ಧ ಪ್ರಕರಣಗಳು ದಾಲಾಗಿವೆ. ಆದರೆ ಯಾರೊಬ್ಬರ ವಿರುದ್ಧವೂ ಸರಿಯಾದ ತನಿಖೆಯಾಗುತ್ತಿಲ್ಲ ಎಂದು ಆರೋಪಿಸಿದರು.

ಟ್ಯಾಂಕ್ ಮೊಹಲ್ಲಾದ ನಿವಾಸಿ ಇಬ್ರಾಹಿಂ ಖಾನ್ ಮನೆಗೆ ಹೋಗೋಣ. ಅಲ್ಲಿ ಏನೇನು ನಡೆಯುತ್ತಿದೆ ನೋಡೋಣ ಎಂದು ಸಿಪಿಐ ಅವರಿಗೆ ಕೇಳಿಕೊಂಡೆವು. ಈಗ ಬೇಡ. ನಾವು ಆತನನ್ನು ಕರೆಸಿ ವಿಚಾರಿಸಿ ಕಳಿಸಿದ್ದೇವೆ. ಕಾನೂನಿನ ಪ್ರಕಾರ ತನಿಖೆ ನಡೆಯುತ್ತಿದೆ ಎಂದು ಸಿಪಿಐ ಹೇಳಿದರು. ನಾವೇ ದೇಶದ್ರೋಹಿ ಮನೆಗೆ ಹೋಗ್ತೀವಿ ಅಂತ ಪಟ್ಟು ಹಿಡಿದೆವು. ಆದರೆ ಸಿಪಿಐ ಆ ರೀತಿ ಮಾಡಬೇಡಿ ಸಹಕಾರ ನೀಡಿ ಎಂದಿದ್ದಾರೆ. ಹೀಗಾಗಿ ಸುಮ್ಮನಾಗಿದ್ದೇವೆ ಎಂದರು.

ದೇಶದ್ರೋಹಿಗಳನ್ನು ಬಂಧಿಸದಿದ್ದರೆ ಭಾರತೀಯ ಪ್ರತಿಯೊಬ್ಬರಿಗೂ ತಪ್ಪಿತಸ್ಥರನ್ನು ಶಿಕ್ಷಿಸುವ ಅಧಿಕಾರವಿದೆ. ಮೇ 12ರ ಬೆಳಗ್ಗೆ 10ರೊಳಗೆ ದೇಶದ್ರೋಹಿಗಳನ್ನು ಬಂಧಿಸದಿದ್ದರೆ ಪೋಲಿಸ್ ಠಾಣೆ ಎದುರು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಬಿಜೆಪಿ ನಗರಾಧ್ಯಕ್ಷ ಡಿ.ಮೋಹನ ರೆಡ್ಡಿ, ಬಿಜೆಪಿ ಪ್ರಕೋಷ್ಟಗಳ ರಾಜ್ಯ ಸಂಯೋಜಕ ಎಸ್.ದತ್ತಾತ್ರಿ, ಮಾಜಿ ಉಪಮೇಯರ್ ಸುರೇಖಾ ಮುರಳೀಧರ್, ಪ್ರಮುಖರಾದ ದೀನದಯಾಳು ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net