

ನವದೆಹಲಿ: ಭಾರತದಲ್ಲಿ ಕೃಷಿ, ಲಾಜಿಸ್ಟಿಕ್ಸ್, ರಕ್ಷಣೆ ಸೇರಿ ಇನ್ನೂ ಮುಂತಾದ ಕ್ಷೇತ್ರಗಳಿಂದ ಡ್ರೋನ್ಗಳಿಗೆ ಬೇಡಿಕೆ ಗಮನಾರ್ಹವಾಗಿ ಹೆಚ್ಚಿದೆ. ಪರಿಣಾಮವಾಗಿ 2030ರ ಹೊತ್ತಿಗೆ ಈ ಉದ್ಯಮದ ಗಾತ್ರ ಸುಮಾರು 2 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಲಿದೆ ಎಂದು ನೆಕ್ಷಜನ್ ಎಂಬ ಅಧ್ಯಯನ ವರದಿ ಮಾಹಿತಿಯನ್ನು ನೀಡಿದೆ.
ಇತ್ತೀಚೆಗೆ ಭಾರತದಲ್ಲಿ ಡ್ರೋನ್ಗಳಿಗೆ ಭಾರಿ ಬೇಡಿಕೆ ಬರುತ್ತಿದೆ. ರಕ್ಷಣೆ ಹೊರತುಪಡಿಸಿದರೆ ಕೃಷಿ ಕ್ಷೇತ್ರದಿಂದ ಹೆಚ್ಚು ಬೇಡಿಕೆ ಇದೆ. ದೇಶದ 15 ನಗರಗಳಲ್ಲಿನ 150 ಡ್ರೋನ್ ಕಂಪನಿಗಳನ್ನು ಸಂದರ್ಶಿಸಿ, ಈ ವರದಿ ತಯಾರಿಸಲಾಗಿದೆ ಎಂದು ನೆಕ್ಷಜನ್ ವಿವರಿಸಿದೆ. 2030ರ ವೇಳೆಗೆ ಕೃಷಿ ಕ್ಷೇತ್ರದಲ್ಲಿ ಡ್ರೋನ್ಗಳಿಗೆ ಶೇಕಡ 40ರಷ್ಟು ಬೇಡಿಕೆ ಹೆಚ್ಚಾಗಲಿದೆ ಎಂದಿದೆ. ಜಾಗತಿಕವಾಗಿಯೂ ಕೃಷಿ ಕ್ಷೇತ್ರದಲ್ಲಿನ ಡ್ರೋನ್ಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಈ ಒಂದು ಕ್ಷೇತ್ರದಲ್ಲಿಯೇ ಸುಮಾರು 51 ಸಾವಿರ ಕೋಟಿ ರೂ. ವಹಿವಾಟು 2030ರ ವೇಳೆಗೆ ನಡೆಯಲಿದೆ ಎಂದು ತಿಳಿಸಿದೆ. ಇದೇ ಜುಲೈ 31, ಆಗಸ್ಟ್ 1 ಮತ್ತು 2ರಂದು ರಾಜಧಾನಿ ದೆಹಲಿಯಲ್ಲಿ ಡ್ರೋನ್ ಇಂಟರ್ನ್ಯಾಷನಲ್ ಎಕ್ಸ್ಪೋ-2025 ನಡೆಯಲಿದ್ದು, ಇದಕ್ಕಾಗಿ ಭಾರತದ ಕಂಪನಿಗಳು ತಯಾರಿ ಮಾಡಿಕೊಳ್ಳುತ್ತಿವೆ.