ಕುಡಿಯುವ ನೀರು ಪೂರೈಕೆಗೆ ಆಗ್ರಹ

ಕುಡಿಯುವ ನೀರು ಪೂರೈಕೆಗೆ ಆಗ್ರಹ
Published on

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಗ್ರಾಮದ ಹಾಲಿನ ಡೇರಿ ಬೀದಿ(ಸೈಟ್)ಯ ಮನೆಗಳಿಗೆ ಕುಡಿಯುವ ನೀರು ಪೂರೈಸುತ್ತಿಲ್ಲ ಎಂದು ಆರೋಪಿಸಿ, ಮಹಿಳೆಯರು ಹಾಗೂ ನಿವಾಸಿಗಳು ಶನಿವಾರ ಚಪ್ಪರದಹಳ್ಳಿ ಗ್ರಾಪಂ ಎದುರು ಖಾಲಿ ಬಿಂದಿಗೆಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.

ಸುಮಾರು ಹದಿನೈದು ದಿನಗಳಿಂದ ಕುಡಿಯುವ ನೀರನ್ನು ಪೂರೈಕೆ ಮಾಡುತ್ತಿಲ್ಲ. ಇವರಿಂದ ನಿತ್ಯ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗಿದೆ. ಈ ಬಗ್ಗೆ ಪಂಚಾಯಿತಿ ಸಿಬ್ಬಂದಿ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೆ ನಮ್ಮ ಬೀದಿಗೆ ಸರಿಯಾದ ರಸ್ತೆ ಹಾಗೂ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆ ಬಂದಾಗ ನೀರು ಮನೆಗಳಿಗೆ ನುಗ್ಗುತ್ತಿದೆ. ಕಳೆದ ಹತ್ತಾರು ವರ್ಷಗಳಿಂದ ರಸ್ತೆ ನಿರ್ಮಾಣ ಮಾಡುವಂತೆ ಎಲ್ಲಾ ಜನಪ್ರತಿನಿಧಿಗಳಿಗೆ ಹಾಗೂ ಪಂಚಾಯಿತಿಗೆ ಮನವಿ ಮಾಡುತ್ತಿದ್ದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ ಎಂದು ಕಿಡಿಕಾರಿದ ಪ್ರತಿಭಟನಾಕಾರರು ಕೂಡಲೇ ಸಮಸ್ಯೆ ಬಗೆಹರಿಸಿ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ಡೇರಿ ಬೀದಿಯ ಮಹಿಳೆಯರು ಹಾಗೂ ನಿವಾಸಿಗಳಿಂದ ಮನವಿ ಸ್ವೀಕರಿಸಿದ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕುಮಾರ್, ಗ್ರಾಮದಲ್ಲಿ ಜಲಜೀವನ ಮಿಷನ್ ಕಾಮಗಾರಿ ನಡೆಯುತ್ತಿರುವುದರಿಂದ ಕೆಲವೆಡೆ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ. ಕೂಡಲೇ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಮೂಲಕ ನಿವಾಸಿಗಳ ಸಮಸ್ಯೆಯನ್ನು ಪರಿಹರಿಸಲಾಗುವುದು. ಇನ್ನ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ಥಳೀಯರು ನೀಡಿರುವ ಮನವಿಯನ್ನು ಮೇಲಾಧಿಕಾರಿಗಳ ಹಾಗೂ ಆಡಳಿತ ಮಂಡಳಿಯ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

ಒಂದು ವಾರದೊಳಗೆ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಮನವಿ ಸಲ್ಲಿಸಿದ ಬಳಿಕ ಸ್ಥಳೀಯ ನಿವಾಸಿಗಳು ಪ್ರತಿಭಟನೆ ಹಿಂಪಡೆದರು. ಸ್ಥಳೀಯರಾದ ನಂಜುಂಡೇಗೌಡ, ಸಿ.ಎನ್. ರಾಜೇಶ್, ನಂಜುಂಡಚಾರಿ, ಮಹೇಶ್ ಮೂರ್ತಿ, ಶಿವಮೂರ್ತಚಾರಿ, ಈಶ್ವರಚಾರಿ, ಹರೀಶ್, ಪುನೀತ್ ಕುಮಾರ್, ಸಚಿನ್, ಗೌರಮ್ಮ, ಲತಾ, ಶೀಲಾ, ಜಯಲಕ್ಷ್ಮಮ್ಮ, ನಾಗಮ್ಮ, ಪಾರ್ವತಮ್ಮ, ಸಾಕಮ್ಮ, ನಾಗಮ್ಮ, ಪೂಜಾ, ಶಾರದಮ್ಮ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net