ಬೆಳೆ ಹಾನಿ ಪರಿಹಾರಕ್ಕೆ ಒತ್ತಾಯ

sgr manavi
ಸಾಗರ ತಾಲೂಕಿನಲ್ಲಿ ಅಕಾಲಿಕ ಮಳೆಯಿಂದಾಗಿ ಬೆಳೆ ಕಳೆದುಕೊಂಡ ರೈತರಿಗೆ ಶೀಘ್ರ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರೈತ ಸಂಘದ ಪದಾಧಿಕಾರಿಗಳು ಎಸಿ ಕಚೇರಿಗೆ ಮನವಿ ಸಲ್ಲಿಸಿದರು. ಶಿವಾನಂದ ಕುಗ್ವೆ, ತೀ.ನ.ಶ್ರೀನಿವಾಸ್, ಎನ್.ಡಿ.ವಸಂತಕುಮಾರ್, ಸುಂದರ ಸಿಂಗ್ ಇತರರಿದ್ದರು.
Published on

ಸಾಗರ: ತಾಲೂಕಿನಲ್ಲಿ ಅಕಾಲಿಕ ಮಳೆಯಿಂದಾಗಿ ಬೇಸಿಗೆ ಬೆಳೆ ನಾಶವಾಗಿದೆ. ಸರ್ಕಾರ ತಕ್ಷಣ ಸಮೀಕ್ಷೆ ನಡೆಸಿ ಪರಿಹಾರ ನೀಡುವಂತೆ ಒತ್ತಾಯಿಸಿ ರೈತ ಸಂಘದ ಪದಾಧಿಕಾರಿಗಳು ಉಪವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

ಮೆಕ್ಕೆಜೋಳ, ಭತ್ತ ಇನ್ನಿತರೆ ಬೆಳೆಗಳು ನಾಶವಾಗಿವೆ. ಹೊಲದಲ್ಲೇ ಮೆಕ್ಕೆಜೋಳ ಮೊಳಕೆ ಬಂದಿದೆ. ಭತ್ತ ಸಹ ಹಾಳಾಗಿದೆ. ರೈತರು ಸಾಲ ಮಾಡಿ ಕೃಷಿ ಮಾಡಿದ್ದು ಸಂಪೂರ್ಣ ನಷ್ಟ ಅನುಭವಿಸಿದ್ದಾರೆ. ಎಕರೆಗೆ 50 ಸಾವಿರ ರೂ. ಖರ್ಚು ಮಾಡಿದ್ದಾರೆ. ಬೆಳೆಹಾನಿ ಪಟ್ಟಿ ಮಾಡಿ ಸೂಕ್ತ ಪರಿಹಾರ ಕೊಡಬೇಕು. ಲಾಭ ಕೊಡದಿದ್ದರೂ ರೈತರು ಖರ್ಚು ಮಾಡಿದ ಹಣವನ್ನಾದರೂ ಸರ್ಕಾರ ಕೊಡಬೇಕು ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ ಒತ್ತಾಯಿಸಿದರು.

ಮಲೆನಾಡು ರೈತ ಹೋರಾಟ ವೇದಿಕೆ ಅಧ್ಯಕ್ಷ ತೀ.ನ.ಶ್ರೀನಿವಾಸ್ ಮಾತನಾಡಿ, ಒಂದು ಕಡೆ ರೈತರೊಂದಿಗೆ ಮಳೆ ಜೂಜಾಟವಾಡಿದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಚೆಲ್ಲಾಟವಾಡುತ್ತಿವೆ. ಉತ್ಪನ್ನಗಳ ದರ ಇಳಿಕೆ, ರಸಗೊಬ್ಬರ ಬೆಲೆ ಏರಿಕೆ ಇನ್ನಿತರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಳೆಯಿಂದಾದ ಹಾನಿಗೆ ಸರ್ಕಾರಗಳಿಂದ ಪರಿಹಾರ ಭರವಸೆಯೂ ಸಿಕ್ಕಿಲ್ಲ ಎಂದು ದೂರಿದರು.

ರೈತ ಸಂಘದ ರಾಜ್ಯ ಸಂಚಾಲಕ ಎನ್.ಡಿ.ವಸಂತಕುಮಾರ್, ತಾಲೂಕು ಅಧ್ಯಕ್ಷ ಸುಂದರ ಸಿಂಗ್, ಪ್ರಧಾನ ಕಾರ್ಯದರ್ಶಿ ಸತೀಶ್ ಅಂಗಡಿ, ರಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net