

ಶಿವಮೊಗ್ಗ: ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಗರದ ವಿವಿಧ ಭಾಗಗಳಿಗೆ ಕಾಶೀಪುರದಿಂದ ನಗರ ಸಾರಿಗೆ ಬಸ್ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಕರುನಾಡು ಸಂರಕ್ಷಣಾ ವೇದಿಕೆ ಪ್ರಮುಖರು ಬುಧವಾರ ಕೆಎಸ್‌ಆರ್‌ಟಿಸಿ ಡಿಪೋ ಅಧಿಕಾರಿಗೆ ಮನವಿ ಸಲ್ಲಿಸಿದರು.
ಕಾಶೀಪುರದಿಂದ ಕರಿಯಣ್ಣ ಬಿಲ್ಡಿಂಗ್, ಪೊಲೀಸ್ ಚೌಕಿ, ಉಷಾ ನರ್ಸಿಂಗ್ ಹೋಂ ಸರ್ಕಲ್‌ನಿಂದ ಸವಳಂಗ ರಸ್ತೆ, ಜಯನಗರ, ಮಾರ್ಕೆಟ್, ಬಸ್ ನಿಲ್ದಾಣ, ಮಿಳಘಟ್ಟ, ಅಣ್ಣಾನಗರ, ಗೋಪಾಳದ ಕೊನೆಯ ಬಸ್ ನಿಲ್ದಾಣದವರೆಗೆ ಬಸ್ ಸೌಲಭ್ಯ ಒದಗಿಸಬೇಕು.
ನಗರದ ಮುಖ್ಯ ಬಸ್ ನಿಲ್ದಾಣದಿಂದ ಗುರುಪುರ, ಹುಣಸೋಡು, ಕಲ್ಲಗಂಗೂರು ಮಾರ್ಗದಲ್ಲೂ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು. ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಸಮಯಕ್ಕೆ ಬಸ್ ವೇಳಾಪಟ್ಟಿ ರೂಪಿಸಬೇಕು. ರಾತ್ರಿ 10ಕ್ಕೆ ರೈಲ್ವೆ ನಿಲ್ದಾಣದಿಂದ ನಗರದ ವಿವಿಧ ಭಾಗಗಳಿಗೆ ಕೆಎಸ್‌ಆರ್‌ಟಿಸಿ ನಗರ ಸಾರಿಗೆ ಸೇವೆ ಒದಗಿಸಬೇಕೆಂದು ಒತ್ತಾಯಿಸಿದರು.
ಇತ್ತೀಚೆಗೆ ಬೊಮ್ಮನಕಟ್ಟೆಗೆ ಕೆಎಸ್‌ಆರ್‌ಟಿಸಿ ಸೇವೆ ಒದಗಿಸಲಾಗಿದೆ. ಅಲ್ಲಿಂದ ದಿನನಿತ್ಯ ಕೆಲಸಕ್ಕೆ ಹೋಗುವ ಕೂಲಿ ಕಾರ್ಮಿಕರಿಗೆ, ಮಹಿಳೆಯರಿಗೆ ಅನುಕೂಲವಾಗುವಂತೆ ವೇಳಾಪಟ್ಟಿ ರೂಪಿಸಬೇಕು. ಬಸ್ ಸಂಚಾರದ ಬಗ್ಗೆ ಮಾಹಿತಿ ನೀಡಲು ಬಸ್ ನಿಲ್ದಾಣದಲ್ಲಿ ಹೆಚ್ಚಿನ ಅಧಿಕಾರಿಗಳನ್ನು ನೇಮಿಸಬೇಕೆಂದು ಆಗ್ರಹಿಸಿದರು.
ಕರುನಾಡು ಸಂರಕ್ಷಣಾ ವೇದಿಕೆ ಅಧ್ಯಕ್ಷ ಎಸ್.ಪಿ.ಶಿವಮೂರ್ತಿ, ಪ್ರಮುಖರಾದ ಎಸ್.ಪಿ.ಶಿವಣ್ಣ, ರಾಜು, ಮೂರ್ತಿ, ಈಶ್ವರ್, ಸಂತೋಷ್ ಇತರರಿದ್ದರು.