ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ

kgl (5)
ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಬಾನುಕುಳಿ ಗ್ರಾಪಂ ಸದಸ್ಯರು ಸಾಗರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ರಾಜೇಶ್ ದೇವಾಡಿಗ, ಸೋಮರಾಜ, ಚಂದ್ರಶೇಖರ್ ನಾಯ್ಕ, ಜಗದೀಶ್ ನಾಯ್ಕ, ಬಿಜು, ವಾಸು ನಾಯ್ಕ ಇತರರಿದ್ದರು.
Published on

ಕಾರ್ಗಲ್: ಭಾರಂಗಿ ಹೋಬಳಿಯ ಬಾನುಕುಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಕಳೆದ ಮೂರು ತಿಂಗಳಿಂದ ಸರಿಯಾಗಿ ವಿದ್ಯುತ್ ಸರಬರಾಜು ಮಾಡದೆ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಭಟ್ಕಳ ವಿಭಾಗದ ಹೆಸ್ಕಾಂ ವಿರುದ್ಧ ಸಾಗರ ತಾಲೂಕು ಆಡಳಿತಕ್ಕೆ ಗುರುವಾರ ಮನವಿ ಸಲ್ಲಿಸಲಾಯಿತು.

ಬಾನುಕುಳಿ ಗ್ರಾಪಂ ನಿಯೋಗ ಗುರುವಾರ ಸಾಗರ ತಾಲೂಕಿನ ಉಪವಿಭಾಗಾಧಿಕಾರಿ, ತಹಸೀಲ್ದಾರ್, ಸಾಗರ ಮೆಸ್ಕಾಂ ಇಂಜಿನಿಯರ್ ಹಾಗೂ ತಾಪಂ ಇಒ ಭೇಟಿ ಮಾಡಿ ಮನವಿ ಸಲ್ಲಿಸಿದ ನಂತರ ಮಾಹಿತಿ ನೀಡಿದರು. ವಿದ್ಯುತ್ ಸಮಸ್ಯೆಗೆ ಕೂಡಲೇ ಶಾಶ್ವತ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದರು.

ನಾಗವಳ್ಳಿ, ನೆಲಹರಿ, ಗುಡ್ಡೆಹಿತ್ಲು, ಬಾಳಿಗಾ ಹಾಗೂ ಮೇಘಾನೆ ಗ್ರಾಮಗಳಲ್ಲಿ ಒಂದು ಸಾವಿರಕ್ಕೂ ಅಧಿಕ ಕುಟುಂಬಗಳು ವಾಸವಾಗಿವೆ. ಕಳೆದ ಮೂರು ತಿಂಗಳಿಂದ ಸರಿಯಾಗಿ ವಿದ್ಯುತ್ ಇಲ್ಲದೆ ಬೆಳೆಗಳು ನಾಶವಾಗುವ ಸ್ಥಿತಿಯಲ್ಲಿವೆ. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಓದಿಗೆ ತೊಂದರೆಯಾಗದೆ ಎಂದು ಬಾನುಕುಳಿ ಗ್ರಾಪಂ ಸದಸ್ಯ ಮಂಜುನಾಥ ನಾಯ್ಕ ದೂರಿದರು.

ನಾವು ಸಾಗರ ತಾಲೂಕಿಗೆ ಒಳಪಟ್ಟರೂ ವಿದ್ಯುತ್ ಸಂಪರ್ಕ ಭಟ್ಕಳ ತಾಲೂಕಿನಿಂದ ಪೂರೈಕೆಯಾಗುತ್ತದೆ. ವಿದ್ಯುತ್ ವ್ಯತ್ಯಯದ ಬಗ್ಗೆ ನಾವು ಅಲ್ಲಿನ ಇಲಾಖಾ ಅಧಿಕಾರಿಗಳಲ್ಲಿ ವಿಚಾರಿಸಿದಾಗ ನೀವು ಸಾಗರ ತಾಲೂಕಿನವರು, ನಮ್ಮಿಂದ ಸಾಗರ ತಾಲೂಕಿನ ವ್ಯಾಪ್ತಿಗೆ ವಿದ್ಯುತ್ ಸರಬರಾಜು ಮಾಡಲು ಸಾಧ್ಯವಿಲ್ಲ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿರುತ್ತಾರೆ ಎಂದರು.

ಗ್ರಾಮಸ್ಥರ ತೀರ್ಮಾನದ ಪ್ರಕಾರ ಮಾ.9ರ ಭಾನುವಾರದೊಳಗೆ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಬೇಕು. ಇಲ್ಲವಾದಲ್ಲಿ ಮಾ.10ರಂದು ಸೋಮವಾರ ನಾಗವಳ್ಳಿ ಗ್ರಾಮದ ವತ್ತದಲ್ಲಿ ಸಾಗರ ಭಟ್ಕಳ ಮಾರ್ಗದ ರಸ್ತೆ ಸಂಚಾರ ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದು ತಿಳಿಸಿದರು.

ಗ್ರಾಪಂ ಸದಸ್ಯರಾದ ರಾಜೇಶ್ ದೇವಾಡಿಗ, ಸೋಮರಾಜ, ಮಾಜಿ ಸದಸ್ಯ ಚಂದ್ರಶೇಖರ್ ನಾಯ್ಕ, ಗ್ರಾಮಸ್ಥರಾದ ಜಗದೀಶ್ ನಾಯ್ಕ, ಬಿಜು, ವಾಸು ನಾಯ್ಕ, ರಾಮಗೊಂಡ, ಎ.ಟಿ.ಚಂದ್ರಕಾಂತ್, ಶಂಕರ ಮರಾಠಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net