ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ

IMG-20240325-WA0006_2
Published on


ಮೈಸೂರು : ಕೃಷಿ ಪಂಪ್ ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಬೇಕು. ಇಲ್ಲವೇ ನೀರು ಕೊಡಬೇಕು ಎಂದು ಆಗ್ರಹಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಆಶ್ರಯದಲ್ಲಿ ರೈತರು ತಿ.ನರಸೀಪುರ ಬನ್ನೂರು ಪಟ್ಟಣದ ಸೆಸ್ಕ್ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಕಚೇರಿ ಮಂದೆ ಜಮಾವಣೆಗೊಂಡ ರೈತರು, ಖಾಲಿ ಬಿಂದಿಗೆ ಪ್ರದರ್ಶಿಸಿ ಸಮರ್ಪಕ ವಿದ್ಯತ್ ನೀಡದ ಅಧಿಕಾರಿಗಳ ವಿರುದ್ಧ ಕಿಡಿಕಾರಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.


ರಾಜ್ಯ ಕಬ್ಬು ಬೆಳೆಗಾರರ ಸಂಘದ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ಮಾತನಾಡಿ, ಜಿಲ್ಲೆ ಹಾಗೂ ತಾಲೂಕಿನಲ್ಲಿ ಬೀಕರ ಬರಗಾಲ ಕಾಡುತ್ತಿದ್ದು, ಹಳ್ಳಿ, ಹಳ್ಳಿಗಳಲ್ಲಿ ಕುಡಿಯುವ ನೀರು ಹಾಗೂ ದನಕರುಗಳಿಗೆ ಮೇವು ಸಿಗುತ್ತಿಲ್ಲ. ಕೃಷಿ ಪಂಪ್ ಸೆಟ್ ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡದೆ ಕಬ್ಬು, ಬಾಳೆ, ಅಡಿಕೆ, ತೆಂಗು ಹಾಗೂ ಇತ್ಯಾದಿ ತರಕಾರಿ ಬೆಳೆಗಳು ನೀರಿಲ್ಲದೆ ಒಣಗುತ್ತಿದ್ದರೂ ಜನಪ್ರತಿನಿಧಿಗಳು ಹಾಗೂ ಇಂಧನ ಇಲಾಖೆ ಅಧಿಕಾರಿಗಳು ರೈತರನ್ನು ಕಗ್ಗತ್ತಲಲ್ಲಿ ಇಟ್ಟು ಚುನಾವಣೆ ಗುಂಗಿನಲ್ಲಿ ನಿರತರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ರೈತರ ಕೃಷಿ ಪಂಪ್ ಸೆಟ್‌ಗಳಿಗೆ ರಾತ್ರಿ ವೇಳೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಗದ್ದೆಗಳ ನೀರು ಹಾಯಿಸಲು ಹೋಗುವ ರೈತರು ಕಾಡು ಪ್ರಾಣಿಗಳ ಹಾವಳಿಯಿಂದ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದು, ಅವರ ಕುಟುಂಬ ಬೀದಿ ಪಾಲಾಗುತ್ತಿದೆ. ರೈತರ ರಕ್ಷಣೆ ಮಾಡಲು ಹಗಲು ವೇಳೆ ಬೆಳಗ್ಗೆ 6 ರಿಂದ ಸಂಜೆ 6 ರ ವರಗೆ ವಿದ್ಯುತ್ ಪೂರೈಕೆ ಮಾಡಿ ಅನ್ನದಾತರ ಜೀವ ಉಳಿಸಿ, ಕುಟುಂಬ ರಕ್ಷಣೆ ಮಾಡಬೇಕು. ಈಗ ಪರೀಕ್ಷಾ ಸಮಯವಾಗಿರುವುದರಿಂದ ರಾತ್ರಿಯ ವೇಳೆ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡಬೇಕೆಂದು ಒತ್ತಾಯಿಸಿದರು.


ಅಕ್ರಮ -ಸಕ್ರಮ ಯೋಜನೆಯನ್ನು ಈ ಹಿಂದಿನಂತೆಯೇ ಯತಾಸ್ಥಿತಿ ಜಾರಿಗೆ ತಂದು ಕೃಷಿ ಪಂಪ್‌ಸೆಟ್ ಗಳ ರೈತರ ರಕ್ಷಣೆ ಮಾಡಬೇಕು. ರಾಜ್ಯ ಸರ್ಕಾರ ಮನೆ ವಿದ್ಯುತ್ ಬಳಕೆದಾರರಿಗೆ 200 ಯೂನಿಟ್ ಕರೆಂಟ್ ಉಚಿತ ಎಂದು ಘೋಷಣೆ ಮಾಡಿದೆ. ಆದರೆ ಗ್ರಾಹಕರಿಗೆ ತಿಳಿಯದ ರೀತಿಯಲ್ಲಿ ಇಲಾಖೆ ಕೆಲವು ನಿರ್ಬಂಧ ವಿಧಿಸಿ ಅಕ್ರಮವಾಗಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಒತ್ತಾಯ ಮಾಡುತ್ತಿರುವುದನ್ನು ತಕ್ಷಣವೇ ನಿಲ್ಲಿಸಬೇಕು. ಟಿ.ಸಿ.ಬದಲಾವಣೆ ಹಾಗೂ ದುರಸ್ತಿಗೆ ರೈತರಿಂದ ಹಣ ಸುಲಿಗೆ ಮಾಡುವುದನ್ನು ನಿಲ್ಲಿಸ ಬೇಕು, ಟಿ.ಸಿ.ಗಳು ಕೆಟ್ಟು ಹೋದರೆ 72 ಗಂಟೆಯೊಳಗೆ ದುರಸ್ತಿ ಮಾಡಿಕೊಡಬೇಕೆಂದು ಆಗ್ರಹಿಸಿದರು.


ಪ್ರತಿಭಟನೆಯಲ್ಲಿ ತಾಲೂಕು ಉಪಾಧ್ಯಕ್ಷ ಹೆಗ್ಗೂರು ರಂಗರಾಜು, ತಾಲೂಕು ಸಂಘಟನಾ ಕಾರ್ಯದರ್ಶಿ ಕುರುಬೂರು ಪ್ರದೀಪ್, ಬನ್ನೂರು ಸೂರಿ, ಬಿ.ಎನ್.ಶ್ರೀನಿವಾಸ್, ಬಾನಗವಾಡಿ ಬಿ.ಎಲ್.ವೆಂಕಟೇಗೌಡ, ರಾಮಕೃಷ್ಣ, ಜಗದೀಶ್, ಹನುಮನಾಳು ಚೆನ್ನಮಲ್ಲು, ವರದರಾಜ್ ಕುಂತನಹಳ್ಳಿ ಸ್ವಾಮಿ, ಬೆಟ್ಟಯ್ಯ, ಅತ್ತಹಳ್ಳಿ ಸಿ.ಲಿಂಗಣ್ಣ, ಎ.ಪಿ.ನವೀನ್, ಎ.ಎನ್.ಮಹೇಶ್, ಎ.ಪಿ.ಚೇತನ್, ಅನಿಲ್ ಕುಮಾರ್, ಮೆಡಿಕಲ್ ಮಹೇಶ್, ಹೊನ್ನಯ್ಯ, ವಿನಯ್ ಕುಮಾರ್, ಲೋಕೇಶ್, ಚಾಮನಹಳ್ಳಿ ನಿಂಗೇಗೌಡ, ಕರಿಯಪ್ಪ, ಶಂಕರ್, ಕಿಟ್ಟಣ್ಣ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net