ಕುರುಬ ಸಮಾಜ ನಿಂದಿಸಿದವರ ವಿರುದ್ಧ ಕ್ರಮವಾಗಲಿ

12-RNR-06
Published on

ರಾಣೆಬೆನ್ನೂರ: ಸಾರ್ವಜನಿಕವಾಗಿ ಕುರುಬ ಜನಾಂಗದ ಬಗ್ಗೆ ನಿಂದನೆ ಮಾಡಿ ಹಾಗೂ ಕುರುಬ ಸಮಾಜದ ಸಿಎಂ ಆಗಿರುವ ಸಿದ್ದರಾಮಯ್ಯನವರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ವ್ಯಕ್ತಿಯ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ತಾಲೂಕು ಪ್ರದೇಶ ಕುರುಬ ಸಮಾಜದ ವತಿಯಿಂದ ಮಂಗಳವಾರ ಡಿವೈಎಸ್ಪಿ ಲೋಕೇಶಪ್ಪ ಜೆ. ಅವರ ಮೂಲಕ ಗೃಹ ಇಲಾಖೆಗೆ ಮನವಿ ಸಲ್ಲಿಸಲಾಯಿತು.

ಸಮಾಜದ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಕಂಬಳಿ ಮಾತನಾಡಿ, ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕುರುಬ ಜಾತಿಯವರಾದ್ದರಿಂದ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕು ಹಾಗೂ ಕುರುಬ ಸಮಾಜದ ಬಗ್ಗೆ ಕೀಳಾದ ರೀತಿಯಲ್ಲಿ ಅಶ್ಲೀಲ ಪದಗಳನ್ನು ಬಳಸಿ ಸಾರ್ವಜನಿಕವಾಗಿ ನಿಂದನೆ ಮಾಡಲಾಗಿದೆ.

ಈ ವಿಕೃತ ಮನಸುಳ್ಳ ವ್ಯಕ್ತಿಗಳಿಂದ ಜಾತಿ ಜಾತಿಗಳ ನಡುವೆ ದ್ವೇಷವನ್ನು ಉಂಟು ಮಾಡಿ ಸಮಾಜದಲ್ಲಿ ಅಶಾಂತಿ ಉಂಟು ಮಾಡಲು ಪ್ರಯತ್ನಿಸಿರುತ್ತಾರೆ. ಸಾರ್ವಜನಿಕವಾಗಿ ಬಂದಿರುವ ವೀಡಿಯೋ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದ್ದರಿಂದ ಇವರ ಮೇಲೆ ಜಾತಿ ನಿಂದನೆ ಹಾಗೂ ಅಶ್ಲೀಲ ಪದಗಳನ್ನು ಬಳಸಿ ಕುರುಬ ಸಮಾಜಕ್ಕೆ ಅವಮಾನ ಮಾಡಿರುವ ಮಂಡ್ಯ ಜಿಲ್ಲೆಯ ಶಾನುಭೋಗನಹಳ್ಳಿ ಗ್ರಾಮದ ಬಿ.ಎನ್​. ಕುಮಾರ ನಿಂಗಯ್ಯ ಹಾಗೂ ಮಹೇಶ ಎಂಬುವವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಮೃತ್ಯುಂಜಯ ಗುದಿಗೇರ, ಕುಬೇರಪ್ಪ ಕೊಂಡಜ್ಜಿ, ಎಂ.ಕೆ. ಕಂಬಳಿ, ರಾಜು ಮೈಲಾರ, ಬಸವರಾಜ ಕಂಬಳಿ, ರಮೇಶ ಕರಡೆಣ್ಣನವರ, ರಾು ಕಂಬಳಿ, ಅಶೋಕ ಅಂಬಲಿ, ಕುಬೇರಪ್ಪ ತಹಸೀಲ್ದಾರ್​, ಚಂದ್ರು ಕದರಮಂಡಲಗಿ, ಬೀರಪ್ಪ ಮಣೇಗಾರ, ಮಾಳಪ್ಪ ಪೂಜಾರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net