

ಸಾಗರ: ಸಮ ಸಮಾಜದ ನಿರ್ಮಾಣಕ್ಕೆ ಕಾಂಗ್ರೆಸ್ ಪಕ್ಷ ನೀಡಿರುವ ಕೊಡುಗೆ ದೊಡ್ಡದು. ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷದ ಕಾರ್ಯಕ್ರಮಗಳನ್ನು ಮನೆಮನೆಗೆ ತಲುಪಿಸುವ ಕೆಲಸವಾಗಬೇಕು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರದ ಗಾಂಧಿ ಮಂದಿರದಲ್ಲಿ ಗುರುವಾರ ಮಹಿಳಾ ಕಾಂಗ್ರೆಸ್‌ನಿಂದ ಆಯೋಜಿಸಿದ್ದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಪ್ರಮುಖ ಕೊಂಡಿ. ಸರ್ಕಾರದ ಸಾಧನೆಯನ್ನು ಜನರಿಗೆ ತಲುಪಿಸುವ ಕೆಲಸ ನಿಮ್ಮಿಂದ ಆಗಬೇಕು ಎಂದರು.
ಮಹಿಳಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶ ಹೊಂದಲಾಗಿದೆ. ಕನಿಷ್ಠ 5 ಸಾವಿರ ಮಹಿಳೆಯರನ್ನು ಒಂದೆಡೆ ಸೇರಿಸಿ ಅವರ ಸಮಸ್ಯೆಗೆ ಕಿವಿಯಾಗುವ ಕೆಲಸ ಮಾಡೋಣ. ಗ್ಯಾರಂಟಿ ಯೋಜನೆ ಮತ್ತು ರಾಜ್ಯ ಸರ್ಕಾರದ ವಿವಿಧ ಸೌಲಭ್ಯಗಳಿಂದ ಜನರು ಪಕ್ಷಕ್ಕೆ ಹೆಚ್ಚಿನ ಬೆಂಬಲ ನೀಡುತ್ತಿದ್ದಾರೆ ಎಂದು ತಿಳಿಸಿದರು.
ನೂರು ವರ್ಷ ಇತಿಹಾಸ ಇರುವ ಕಾಂಗ್ರೆಸ್ ಜನಸಾಮಾನ್ಯರ ಪಕ್ಷ. ಬಿಜೆಪಿ ತನ್ನ ಆದರ್ಶ ಕಳೆದುಕೊಂಡು ಬೀದಿಗೆ ಬಂದು ನಿಂತಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಸಿ.ಟಿ.ರವಿ ಆಡಿರುವ ಮಾತು ಬಿಜೆಪಿಯ ನೈತಿಕ ಅಧಃಪತನಕ್ಕೆ ಸಾಕ್ಷಿ. ಇಂತಹ ಸಂದರ್ಭದಲ್ಲಿ ಮಹಿಳೆಯರು ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು. ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷವನ್ನು ಸಂಘಟಿಸಲು ಮಹಿಳಾ ಕಾಂಗ್ರೆಸ್ ಈಗಿನಿಂದಲೇ ಯೋಜನೆ ರೂಪಿಸಬೇಕು ಎಂದು ಹೇಳಿದರು.
ಮಹಿಳಾ ಕಾಂಗ್ರೆಸ್ ತಾಲೂಕು ಅಧ್ಯಕ್ಷೆ ಪ್ರಭಾವತಿ, ಉಷಾ, ಕಲಸೆ ಚಂದ್ರಪ್ಪ, ಸುರೇಶ್‌ಬಾಬು, ಗಣಪತಿ ಮಂಡಗಳಲೆ, ಮಕ್ಬೂಲ್ ಸಾಬ್, ಲಲಿತಮ್ಮ, ಶಿರಿಜಾನ್, ಜ್ಯೋತಿ ಕೋವಿ, ಮಹ್ಮದ್ ಖಾಸಿಂ, ಶ್ಯಾಮಲಾ ದೇವರಾಜ್, ಕಲಾವತಿ ಇತರರಿದ್ದರು.