

ನವದೆಹಲಿ: ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರ ಪ್ರಕರಣ ವಿಚಾರಣೆ ನಡೆಸುತ್ತಿರುವ ದೆಹಲಿ ಹೈಕೋರ್ಟ್, ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರು ಮಾತನಾಡಿರುವ ದ್ವೇಷ ಭಾಷಣದ ವಿಡಿಯೋ ಸಲ್ಲಿಸುವಂತೆ ಸೂಚಿಸಿದೆ.
ಈಶಾನ್ಯ ದೆಹಲಿಯಲ್ಲಿ ಸಂಭವಿಸಿದ ಹಿಂಸಾಚಾರ ಪ್ರಕರಣ ಕುರಿತು ನಿವೃತ್ತ ಅಧಿಕಾರಿ ಹರ್ಷ ಮಾಂಡರ್ ಎಂಬುವವರ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಭಾಷಣದ ವಿಡಿಯೋ ಸಲ್ಲಿಸುವಂತೆ ದೆಹಲಿ ಪೊಲೀಸರಿಗೆ ಸೂಚಿಸಿತು.
ದೆಹಲಿ ಪೊಲೀಸರ ಪರ ವಾದ ಮಂಡಿಸಿದ ಸಾಲಿಟರ್ ಜನರಲ್ ವಿಚಾರಣೆಯನ್ನು ನಾಳೆಗೆ ಮುಂದೂಡಬೇಕು ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಮೂರ್ತಿ ಮುರಳೀಧರ್ ನಿಮಗೆ ಗಲಭೆ ನಡೆದಿರುವುದು ತುರ್ತು ಎನಿಸುವುದಿಲ್ಲವೆ. ಅಪರಾಧಿಗಳ ವಿರುದ್ಧ ಎಫ್ಐಆರ್ ದಾಖಲಿಸುವುದು ತುರ್ತು ಅಲ್ಲವೆ ಎಂದು ಅವರನ್ನು ಪ್ರಶ್ನಿಸಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಅರ್ಜಿದಾರರ ಪರ ವಕೀಲ ರಾಹುಲ್ ಮೆಹ್ರಾ, ಗಲಭೆ ನಡೆಯುವುದಕ್ಕೆ ಮುಂಚೆ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರು ಹೇಳಿರುವ ಉದ್ರೇಕಕಾರಿ ಹೇಳಿಕೆಯನ್ನು ಕೋರ್ಟ್ ಗಮನಕ್ಕೆ ತಂದರು.
ವಿಚಾರಣೆಯಲ್ಲಿ ಇದ್ದ ಪೊಲೀಸರು ಆ ಹೇಳಿಕೆ ನೀಡಿರುವುದು ಕಪಿಲ್ ಮಿಶ್ರಾ ಅಲ್ಲ ಎಂದು ತಿಳಿಸಿದರು. ಈ ಹೇಳಿಕೆಗೆ ಸಿಡಿಮಿಡಿಗೊಂಡ ನ್ಯಾಯಮೂರ್ತಿಗಳು ದೆಹಲಿ ಪೊಲೀಸರ ನಡತೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. (ಏಜೆನ್ಸೀಸ್)