ದೆಹಲಿ ಹಿಂಸಾಚಾರವನ್ನು ಮೂಕ ಪ್ರೇಕ್ಷಕರಂತೆ ನೋಡುತ್ತಿರುವ ಕೇಂದ್ರ, ರಾಜ್ಯ ಸರ್ಕಾರ: ಸೋನಿಯಾ ಗಾಂಧಿ ವಾಗ್ದಾಳಿ

soniya feb 27 2020
Published on

ನವದೆಹಲಿ: ಈಶಾನ್ಯ ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರ ತಡೆಗೆ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಮಧ್ಯ ಪ್ರವೇಶ ಮಾಡಬೇಕು ಎಂದು ಕಾಂಗ್ರೆಸ್​ ನಿಯೋಗ ಆಗ್ರಹಿಸಿದೆ.

ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾಗಾಂಧಿ ನೇತೃತ್ವದಲ್ಲಿ ರಾಷ್ಟ್ರಪತಿ ಭೇಟಿ ಮಾಡಿದ ಕಾಂಗ್ರೆಸ್​ ನಿಯೋಗ ಮನವಿ ಸಲ್ಲಿಸಿತು.

ಹಿಂಸಾಚಾರವನ್ನು ಕೇಂದ್ರ ಹಾಗೂ ದೆಹಲಿ ಸರ್ಕಾರ ಮೂಕ ಪ್ರೇಕ್ಷಕರಂತೆ ನೋಡುತ್ತಿವೆ. ಹೀಗಾಗಿ ತಾವು ಮಧ್ಯ ಪ್ರವೇಶ ಮಾಡಿ ಹಿಂಸಾಚಾರ ತಡೆಯಬೇಕು ಎಂದು ನಿಯೋಗ ಮನವಿಯಲ್ಲಿ ಆಗ್ರಹಿಸಿದೆ.

ಹಿಂಸಾಚಾರ ತಡೆಯಲು ವಿಫಲರಾಗಿರುವ ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರನ್ನು ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಸೋನಿಯಾ ಗಾಂಧಿ ಅವರು ಆಗ್ರಹಿಸಿದರು.

ಹಿಂಸಾಚಾರ ತಡೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹಿಂಸೆಯನ್ನು ಮೂಕ ಪ್ರೇಕ್ಷಕರಂತೆ ನೋಡುತ್ತಿವೆ. ಹಿಂಸೆ ಹಾಗೂ ಆಸ್ತಿ ಲೂಟಿ ನಡೆಯುತ್ತಿದೆ. ರಾಷ್ಟ್ರದ ರಾಜಧಾನಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಏನಾಗಿದೆ ಎಂಬುದು ತೀವ್ರ ಕಳವಳಕಾರಿಯಾದ ವಿಚಾರ. ಇದೊಂದು ರಾಷ್ಟ್ರೀಯ ಅವಮಾನ. ಗಲಭೆಯಲ್ಲಿ 34 ಮಂದಿ ಮೃತಪಟ್ಟು 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು.

ನಿಯೋಗದಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್​, ರಾಜ್ಯಸಭೆ ಪ್ರತಿಪಕ್ಷದ ನಾಯಕ ಗುಲಾಮ್ ನಬಿ ಆಜಾದ್, ಮುಖಂಡರಾದ ಅಹ್ಮದ್ ಪಟೇಲ್ ಮತ್ತು ರಂದೀಪ್ ಸುರ್ಜೇವಲಾ ಇದ್ದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net