ದೆಹಲಿ ಹಿಂಸಾಚಾರ ನಿಯಂತ್ರಿಸಲು ಪೊಲೀಸರಿಗೆ ಕೇಂದ್ರ ಗೃಹ ಸಚಿವ ಅಮಿತ್​ ಷಾ ಸೂಚನೆ: ಪೌಜ್​ಪುರದಲ್ಲಿ ಪಥ ಸಂಚಲನ

delhi police feb 26
Published on

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಈಶಾನ್ಯ ದೆಹಲಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾರೂಪ ತಾಳಿ ಸಾವಿನ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​ ಹಾಗೂ ದೆಹಲಿಯ ಹಿರಿಯ ಪೊಲೀಸ್​ ಅಧಿಕಾರಿಗಳೊಂದಿಗೆ ಮಂಗಳವಾರ ತಡ ರಾತ್ರಿ ಮತ್ತೊಂದು ಸಭೆ ನಡೆಸಿದರು.

ಗಲಭೆ ಪೀಡಿತ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಬೇಕು ಹಾಗೂ ಗಲಭೆಯನ್ನು ಸಂಪೂರ್ಣ ನಿಯಂತ್ರಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರು ಪೊಲೀಸರಿಗೆ ಸೂಚನೆ ನೀಡಿದರು ಎಂದು ತಿಳಿದು ಬಂದಿದೆ.

ಸಭೆಯ ನಂತರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ದೆಹಲಿ ಪೊಲೀಸ್ ಆಯುಕ್ತ ಅಮೂಲ್ಯ ಪಟ್ನಾಯಕ್ ಹಾಗೂ ಹಿರಿಯ ಪೊಲೀಸ್​ ಅಧಿಕಾರಿಗಳು ಗಲಭೆ ನಡೆದ ಪ್ರದೇಶಗಳಾದ ಮೌಜ್‌ಪುರ, ಜಾಫ್ರಬಾದ್, ಗೋಕುಲ್‌ಪುರಿ ಮತ್ತು ಭಜನ್‌ಪುರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಬುಧವಾರ ಭದ್ರತಾ ಪಡೆ ಪಥ ಸಂಚಲನ: ತೀವ್ರ ಗಲಭೆ ಪೀಡಿತ ಪ್ರದೇಶವಾದ ಪೌಜ್​ಪುರದಲ್ಲಿ ಭದ್ರತಾ ಪಡೆ ಯೋಧರು ಬುಧವಾರ ಬೆಳಗ್ಗೆ ಪಥ ಸಂಚಲನ ನಡೆಸಿ ನಾಗರಿಕರಲ್ಲಿ ಮೂಡಿದ್ದ ಭಯ ನಿವಾರಿಸಿದರು.

ಗಾಯಾಳುಗಳ ಸ್ಥಳಾಂತರ: ಗಲಭೆಯಲ್ಲಿ ಗಾಯಗೊಂಡು ಚಾಂದ್​​ಬಾಘ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 20 ಮಂದಿಯನ್ನು ಹೈಕೋರ್ಟ್​ ಸೂಚನೆ ಮೇರೆಗೆ ಬೇರೆ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ ಎಂದು ಹೆಚ್ಚುವರಿ ಡಿಸಿಪಿ ಡಿ.ಕೆ.ಗುಪ್ತಾ ತಿಳಿಸಿದ್ದಾರೆ.
ಈ ಆಸ್ಪತ್ರೆಯಲ್ಲಿ ಗಲಭೆಯಲ್ಲಿ ತೀವ್ರ ಗಾಯಗೊಂಡಿದ್ದ ನಾಲ್ವರು ಮೃತಪಟ್ಟಿದ್ದಾರೆ ಎಂದು ಅವುರ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net