

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪ್ರಥಮ ಮಹಿಳೆ ಮೆಲನಿಯಾ ಟ್ರಂಪ್ ಅವರ ಎರಡು ದಿನಗಳ ಭಾರತ ಪ್ರವಾಸ ಅಂತಿಮ ಘಟ್ಟಕ್ಕೆ ಬಂದಿದೆ. ಪ್ರಸ್ತುತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಏರ್ಪಡಿಸಿರುವ ಔತಣಕೂಟದಲ್ಲಿ ಪಾಲ್ಗೊಳ್ಳಲು ಟ್ರಂಪ್ ದಂಪತಿ ರಾಷ್ಟ್ರಪತಿ ಭವನಕ್ಕೆ ಆಗಮಿಸಿದ್ದಾರೆ.
ಟ್ರಂಪ್ ದಂಪತಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪತ್ನಿ ಸವಿತಾ ಕೋವಿಂದ್ ಆತ್ಮೀಯವಾಗಿ ಬರಮಾಡಿಕೊಂಡರು. ಅಮೆರಿಕ ಅಧ್ಯಕ್ಷರ ಗೌರವಾರ್ಥ ರಾಷ್ಟ್ರಪತಿಗಳು ಔತಣಕೂಟವನ್ನು ಆಯೋಜಿಸಿದ್ದಾರೆ. ಟ್ರಂಪ್ ಪುತ್ರಿ ಇವಾಂಕ ಟ್ರಂಪ್ ಮತ್ತು ಅಳಿಯ ಜರೇದ್ ಕುಶ್ನರ್ ಕೂಡ ಉಪಸ್ಥಿತರಿದ್ದಾರೆ.
ಮಂಗಳವಾರ ಬೆಳಗ್ಗೆ ಅಹಮದಾಬಾದ್ಗೆ ಬಂದಿಳಿದ ಟ್ರಂಪ್ ದಂಪತಿ, ಮೊದಲ ದಿನದ ಸಬರಮತಿ ಆಶ್ರಮ ಭೇಟಿ, ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಭಾಗಿ ಹಾಗೂ ತಾಜ್ ಮಹಲ್ ವೀಕ್ಷಣೆ ಮಾಡಿ ದೆಹಲಿಗೆ ಆಗಮಿಸಿದ್ದರು.
ಎರಡನೇ ದಿನವಾದ ಇಂದು ಬೆಳಗ್ಗೆ ಟ್ರಂಪ್ ಗೌರವಾರ್ಥ ರಾಷ್ಟ್ರಪತಿ ಭವನದಲ್ಲಿ ಕಾರ್ಯಕ್ರಮ ನಡೆಯಿತು. ಬಳಿಕ ರಾಜ್ಘಾಟ್ಗೆ ಟ್ರಂಪ್ ದಂಪತಿ ಭೇಟಿ ನೀಡಿ ಮಹಾತ್ಮ ಗಾಂಧಿ ಸಮಾಧಿಗೆ ಗೌರವ ಸಲ್ಲಿಸಿದರು. ಬಳಿಕ ದೆಹಲಿಯ ಹೈದರಾಬಾದ್ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಟ್ರಂಪ್ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯಿತು.
ಇದರ ನಡುವೆ ದೆಹಲಿಯ ಸರ್ಕಾರಿ ಶಾಲೆಯೊಂದಕ್ಕೆ ಮೆಲನಿಯಾ ಟ್ರಂಪ್ ಭೇಟಿ ನೀಡಿದರು. ಮಧ್ಯಾಹ್ನ ಅಮೆರಿಕ ರಾಯಭಾರ ಕಚೇರಿಯಲ್ಲಿ ಸಿಇಒಗಳ ದುಂಡುಮೇಜಿನ ಸಭೆ ನಡೆಯಿತು. ಇದೀಗ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿರುವ ಟ್ರಂಪ್ ಔತಣಕೂಟದಲ್ಲಿ ಪಾಲ್ಗೊಂಡಿದ್ದಾರೆ. ಇದು ಮುಗಿದ ಬಳಿಕ ರಾತ್ರಿ 10ಕ್ಕೆ ಟ್ರಂಪ್ ದಂಪತಿ ಅಮೆರಿಕಗೆ ನಿರ್ಗಮಿಸಲಿದ್ದಾರೆ. (ಏಜೆನ್ಸೀಸ್)