

ನವದೆಹಲಿ : ದೇಶಾದ್ಯಂತ ದೀಪಾವಳಿ ಹಬ್ಬದ ಆಚರಣೆ ಪ್ರಾರಂಭವಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾಲಿನ್ಯದ ಮಟ್ಟ ( Diwali toxic air) ಏರಿಕೆಯಾಗಿ ಗಾಳಿಯು ಹೆಚ್ಚು ವಿಷಕಾರಿಯಾಗಿದ್ದು, ನಗರದ ವಾಯು ಗುಣಮಟ್ಟ ಸೂಚ್ಯಂಕ ತುಂಬಾ ಕಳಪೆಯಾಗಿದೆ ಎಂದು ಹವಮಾನ ಇಲಾಖೆ ಸೋಮವಾರ (ಅ.20) ವರದಿ ಮಾಡಿದೆ.
ಮಾಲಿನ್ಯ ಮಟ್ಟವನ್ನು ನಿಯಂತ್ರಿಸುವ ಗುರಿಯನ್ನು ಹೊಂದಿರುವ ವಾಯು ಗುಣಮಟ್ಟ ನಿರ್ವಹಣಾ ಆಯೋಗ (CAQM) ಭಾನುವಾರ ದೆಹಲಿಯಲ್ಲಿ ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆ (GRAP) ಯ ಹಂತ II ಅನ್ನು ಜಾರಿಗೊಳಿಸಿದ್ದರೂ ಕೂಡಾ ಗಾಳಿಯ ಗುಣಮಟ್ಟದಲ್ಲಿ ಈ ಕುಸಿತ ಕಂಡುಬಂದಿದೆ. ಇದು ಅಕ್ಟೋಬರ್ 14 ರಿಂದ ಈಗಾಗಲೇ ಜಾರಿಯಲ್ಲಿರುವ ಹಂತ I ಕ್ರಮಗಳ ಜೊತೆಗೆ ಕಂಡುಬಂದಿದೆ.
ತಡರಾತ್ರಿ, ದೆಹಲಿಯ 38 ಮೇಲ್ವಿಚಾರಣಾ ಕೇಂದ್ರಗಳಲ್ಲಿ 24 ಕೇಂದ್ರಗಳು "ತುಂಬಾ ಕಳಪೆ" ಗಾಳಿಯ ಗುಣಮಟ್ಟವನ್ನು ದಾಖಲಿಸಿವೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ವರದಿ ಮಾಡಿತ್ತು. ಇಂದು ಬೆಳಿಗ್ಗೆ ಆನಂದ್ ವಿಹಾರ್ ನಗರದಲ್ಲಿ ಅತ್ಯಂತ ವಿಷಕಾರಿ ಗಾಳಿ ಇದ್ದು, ಇದು ತೀರ್ವ ವರ್ಗಕ್ಕೆ ಇಳಿದಿದೆ ಎಂದು ಹೇಳಿದ್ದಾರೆ.
ಏತನ್ಮಧ್ಯೆ, ನವದೆಹಲಿ ಪ್ರದೇಶದಲ್ಲಿ ವಾಯು ಗುಣಮಟ್ಟ ಸೂಚ್ಯಂಕ 367, ವಿಜಯ್ ನಗರ 348, ನೋಯ್ಡಾ 341, ನೋಯ್ಡಾ ಸೆಕ್ಟರ್ 1 344 ಮತ್ತು ಗುರುಗ್ರಾಮ್ 283 ರಷ್ಟಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.
ಸಿಪಿಸಿಬಿ ದತ್ತಾಂಶದ ಪ್ರಕಾರ, ಸಿರಿ ಫೋರ್ಟ್, ದಿಲ್ಶಾದ್ ಗಾರ್ಡನ್ ಮತ್ತು ಜಹಾಂಗೀರ್‌ಪುರಿ ಮುಂತಾದ ಪ್ರದೇಶಗಳಲ್ಲಿ 318 ಎಕ್ಯೂಐ ದಾಖಲಿಸಿದ್ದು, ಪಂಜಾಬಿ ಬಾಗ್ 313, ನೆಹರು ನಗರ 310, ಅಶೋಕ್ ವಿಹಾರ್ 305 ಮತ್ತು ಬವಾನಾ 304 ರ ವಾಯು ಗುಣಮಟ್ಟ ಸೂಚ್ಯಂಕವನ್ನು ದಾಖಲಿಸಿವೆ.
ದೀಪಾವಳಿಯ ಮರುದಿನ ಮಂಗಳವಾರ ಗಾಳಿಯ ಗುಣಮಟ್ಟ ತೀವ್ರ ವರ್ಗಕ್ಕೆ ಇಳಿಯುವ ನಿರೀಕ್ಷೆ ಇದ್ದು, ಈ ವಾರವೂ ಇದೇ ರೀತಿಯ ಪ್ರವೃತ್ತಿ ಇರಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.
GRAP ಕ್ರಮಗಳ ಹಂತ II ಅನ್ನು ಅನುಷ್ಠಾನಗೊಳಿಸುವುದರ ಜೊತೆಗೆ, CAQM ಎಲ್ಲಾ ಅನುಷ್ಠಾನ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಜಾಗರೂಕತೆಯನ್ನು ಕಾಯ್ದುಕೊಳ್ಳಲು ಹಾಗೂ ಧೂಳು ತಗ್ಗಿಸುವಿಕೆಯ ಮೇಲೆ ಪ್ರದೇಶದಲ್ಲಿ ವಾಯು ಮಾಲಿನ್ಯವನ್ನು ನಿಗ್ರಹಿಸಲು ಸಮಗ್ರ ನೀತಿಯ ಅಡಿಯಲ್ಲಿ ವಿವರಿಸಿರುವ ಸಮಯಸೂಚಿಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ನಿರ್ದೇಶನ ನೀಡಿದೆ.
ಕಳೆದ ವಾರ ಸುಪ್ರೀಂ ಕೋರ್ಟ್ ದೀಪಾವಳಿಯ ಸಮಯದಲ್ಲಿ ದೆಹಲಿ-ಎನ್‌ಸಿಆರ್‌ನಲ್ಲಿ ಹಸಿರು ಪಟಾಕಿಗಳನ್ನು ಸಿಡಿಸಲು ಅನುಮತಿ ನೀಡಿದ ನಂತರ ನಗರದಲ್ಲಿ ವಾಯು ಮಾಲಿನ್ಯ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ.
ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಬೆಳಿಗ್ಗೆ 6 ರಿಂದ 7 ರವರೆಗೆ ಮತ್ತು ನಂತರ ರಾತ್ರಿ 8 ರಿಂದ ರಾತ್ರಿ 10 ರವರೆಗೆ ಮಾತ್ರ ಪಟಾಕಿಗಳನ್ನು ಮಾರಾಟ ಮಾಡಲು ಅವಕಾಶವಿರುತ್ತದೆ ಮತ್ತು ಅಕ್ಟೋಬರ್ 18 ರಿಂದ 20 ರವರೆಗೆ 2 ದಿನಗಳ ಕಾಲ ಮಾತ್ರ ಮಾರಾಟ ಮಾಡಲಾಗುತ್ತದೆ ಎಂದು ತಿಳಿಸಿತ್ತು. (ಏಜೆನ್ಸೀಸ್)