ಕೆಲವೇದಿನಗಳಲ್ಲಿ ನೇಣುಗಂಬಕ್ಕೇರಲಿರುವ ನಿರ್ಭಯಾ ಅತ್ಯಾಚಾರ ಅಪರಾಧಿಗಳಿಗೆ ಪತ್ರ ಬರೆದ ಜೈಲು ಅಧಿಕಾರಿಗಳು..

22 Feb 20
Published on

ನವದೆಹಲಿ: ನಿರ್ಭಯಾ ಅತ್ಯಾಚಾರ ಅಪರಾಧಿಗಳಿಗೆ ಮಾರ್ಚ್​ 3ರಂದು ಮರಣದಂಡನೆ ವಿಧಿಸಿ ದೆಹಲಿ ಪಟಿಯಾಲ ಕೋರ್ಟ್​ ಡೆತ್​ ವಾರಂಟ್ ಹೊರಡಿಸಿದೆ.

ಅಪರಾಧಿಗಳ ಗಲ್ಲುಶಿಕ್ಷೆಯ ದಿನ ಹತ್ತಿರ ಬರುತ್ತಿದ್ದಂತೆ ತಿಹಾರ್​ ಜೈಲು ಅಧಿಕಾರಿಗಳು ನಾಲ್ವರಿಗೂ ಅವರವರ ಕುಟುಂಬದವರನ್ನು ಭೇಟಿಯಾಗುವ ಸಂಬಂಧ ಪತ್ರ ಬರೆದಿದ್ದಾರೆ.

ಈ ಮೊದಲು ಅಪರಾಧಿಗಳನ್ನು ಫೆ.1ರಂದು ನೇಣಿಗೇರಿಸಬೇಕು ಎಂದು ಆದೇಶವಿತ್ತು. ಈ ಹಿನ್ನೆಲೆಯಲ್ಲಿ ಪವನ್​ ಮತ್ತು ಮುಕೇಶ್​ ಫೆ.1ಕ್ಕೂ ಮೊದಲೇ ತಮ್ಮ ಕುಟುಂಬದವರನ್ನು ಭೇಟಿಯಾಗಿದ್ದರು. ಈಗ ವಿನಯ್ ಶರ್ಮಾ ಮತ್ತು ಅಕ್ಷಯ್​ ಉಳಿದಿದ್ದಾರೆ. ಅವರು ಯಾವಾಗ ತಮ್ಮ ಕುಟುಂಬವನ್ನು ಭೇಟಿಯಾಗಲು ಇಷ್ಟಪಡುತ್ತಾರೋ ಆಗ ಸಿದ್ಧತೆ ಮಾಡಲಾಗುತ್ತದೆ ಎಂದು ಜೈಲು ಸಿಬ್ಬಂದಿ ತಿಳಿಸಿದ್ದಾರೆ.

ಇಷ್ಟುದಿನ ಕುಟುಂಬದವರು ಯಾರೇ ನೋಡಲು ಬಂದರೂ ಜೈಲಿನಲ್ಲಿ ಕಿಟಕಿಯ ಮೂಲಕವಷ್ಟೇ ಮಾತುಕತೆಗೆ ಅವಕಾಶ ಇತ್ತು. ಈಗ ಕೊನೇ ಭೇಟಿಯಾಗಿದ್ದರಿಂದ ಮುಖಾಮುಖಿ ಕುಳಿತು ಮಾತನಾಡಲು ಅವಕಾಶ ಇರುತ್ತದೆ ಎನ್ನಲಾಗಿದೆ.

ಅಷ್ಟೇ ಅಲ್ಲ ತಿಹಾರ್​ ಜೈಲು ಅಧಿಕಾರಿಗಳು ಉತ್ತರ ಪ್ರದೇಶ ಜೈಲು ಆಡಳಿತಕ್ಕೆ ಪತ್ರ ಬರೆದಿದ್ದು, ಅಪರಾಧಿಗಳನ್ನು ಗಲ್ಲಿಗೇರಿಸುವ ದಿನ (ಮಾರ್ಚ್​ 3)ಕ್ಕೆ ಎರಡು ದಿನ ಮೊದಲೇ ಹ್ಯಾಂಗ್​ಮನ್​ನನ್ನು ಕಳಿಸಿಕೊಡುವಂತೆ ತಿಳಿಸಿದ್ದಾರೆ.

ಈ ನಾಲ್ವರಲ್ಲಿ ವಿನಯ್​ ಶರ್ಮಾ ಫೆ.16ರಂದು ಜೈಲಿನ ಗೋಡೆಗೆ ತನ್ನ ತಲೆಯನ್ನು ಜಜ್ಜಿಕೊಂಡಿದ್ದ. ಆತನ ಮಾನಸಿಕ ಸ್ಥಿತಿ ಹದಗೆಟ್ಟಿದೆ ಎನ್ನಲಾಗಿತ್ತು. ಇದೇ ಕಾರಣಕ್ಕೆ ಆತನ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ ಎಂದು ಜೈಲು ಆಡಳಿತ ಮಾಹಿತಿ ನೀಡಿದೆ.

2012ರಲ್ಲಿ ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್​​ನಲ್ಲಿ ನಿರ್ಭಯಾ ಮೇಲೆ ಸಾಮೂಹಿಕ ಅತ್ಯಾಚಾರವಾಗಿತ್ತು. ಆಕೆ ಸಿಂಗಪುರದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಅದಾದ ಏಳುವರ್ಷಗಳ ಬಳಿಕ ಸುಪ್ರೀಂಕೋರ್ಟ್ ಅಪರಾಧಿಗಳಿಗೆ ಮರಣದಂಡನೆ ನಿಗದಿ ಮಾಡಿತ್ತು. ಆದರೆ ಕೆಲವು ಕಾನೂನು ಪ್ರಕ್ರಿಯೆಗಳಿಂದ ಶಿಕ್ಷೆ ಜಾರಿ ವಿಳಂಬವಾಗುತ್ತಿತ್ತು. ಇತ್ತೀಚೆಗೆ ದೆಹಲಿ ಪಟಿಯಾಲಾ ಕೋರ್ಟ್​ ಮಾರ್ಚ್​ 3ರಂದು ಗಲ್ಲುಶಿಕ್ಷೆ ನಿಗದಿ ಮಾಡಿ ಡೆತ್​ವಾರಂಟ್​ ಜಾರಿಗೊಳಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net