ಪತ್ನಿಯ ಮೂಗುತಿಯೇ ಬಿಚ್ಚಿಡ್ತು ಪತಿಯ ಕರಾಳ ಮುಖ! ಉದ್ಯಮಿ ಬೆನ್ನತ್ತಿದ ಪೊಲೀಸರಿಗೆ ಕಾದಿತ್ತು ಭಯಾನಕ ಸಂಗತಿ | Murder Mystery

ವಿಜಯವಾಣಿ - 2025-04-11T151134.783
Published on

Murder Mystery: ಸುಮಾರು ಒಂದು ತಿಂಗಳ ಹಿಂದೆ ಚರಂಡಿಯಲ್ಲಿ ಅನಾಥ ಶವವಾಗಿ ಬಿದ್ದಿದ್ದ ಮಹಿಳೆಯ ಸಾವಿನ ಬಗ್ಗೆ ಮಾಹಿತಿ ಇಲ್ಲದ ದೆಹಲಿ ಪೊಲೀಸರು, ಆಕೆಯ ಮೃತದೇಹವನ್ನು ಯಾರೋ ಬೆಡ್​ಶೀಟ್​ನಿಂದ ಸುತ್ತಿ, ಸಿಮೆಂಟ್​ ಚೀಲಕ್ಕೆ ಕಟ್ಟಿ ಚರಂಡಿಗೆ ಎಸೆದಿರುವುದನ್ನು ಕಂಡು ಇದು ಭೀಕರ, ಸಂಚಿನ ಕೊಲೆ ಪ್ರಕರಣ ಎಂಬುದನ್ನು ಖಚಿತಪಡಿಸಿಕೊಂಡರು. ಈ ಕೇಸ್​ ಬೆನ್ನತ್ತಿದ ಖಾಕಿ ಪಡೆಗೆ ಮಹಿಳೆಯ ಮೂಗುತಿಯೇ ಇಡೀ ಪ್ರಕರಣವನ್ನು ಬಯಲಿಗೆಳೆಯಲು ಸಹಾಯ ಮಾಡಿರುವುದು ಅಚ್ಚರಿ ಸಂಗತಿ.

ಮೂಗುತಿಯೇ ಆರೋಪಿಗೆ ತೂಗುಗತ್ತಿ

ಚರಂಡಿಯಲ್ಲಿ ಶವವಾಗಿ ಪತ್ತೆಯಾದ ಮಹಿಳೆಯ ಸಾವಿನ ತನಿಖೆ ಕೈಗೊಂಡ ಪೊಲೀಸರು, ಆಕೆಯ ಮೂಗಿನಲ್ಲಿದ್ದ ಮೂಗುತಿಯನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಕೊಂಚ ದುಬಾರಿ ಮೌಲ್ಯದ ಪಿನ್ ಆಗಿರಬಹುದು ಎಂಬ ಸಂಗತಿ ತಿಳಿಯುತ್ತಿದ್ದಂತೆ ಇದೇ ಪ್ರಕರಣದ ಪ್ರಮುಖ ಸುಳಿವು ಎಂದು ಪರಿಗಣಿಸಿ, ತಮ್ಮ ತನಿಖೆಯನ್ನು ಚುರುಕುಗೊಳಿಸಿದ್ದಾರೆ. 20 ವರ್ಷಗಳ ದಾಂಪತ್ಯದ ಜೀವನವನ್ನು ಕೊಲೆಯಲ್ಲಿ ಅಂತ್ಯಗೊಳಿಸಿದ ಆರೋಪಿ ಪತಿ, ಉದ್ಯಮಿ ಅನಿಲ್ ಕುಮಾರ್ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.

ಮಾರ್ಚ್ 15ರಂದು, ದೆಹಲಿಯ ಚರಂಡಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾದ ಬೆನ್ನಲ್ಲೇ ಪೊಲೀಸರು ಆಕೆ ಧರಿಸಿದ್ದ ಮೂಗುತಿ ಮುಂದಿಟ್ಟು ತನಿಖೆ ಕೈಗೊಂಡರು. ದಕ್ಷಿಣ ದೆಹಲಿಯಲ್ಲಿನ ಆಭರಣದ ಅಂಗಡಿಗೆ ತೆರಳಿದ ಖಾಕಿ ಪಡೆ, ಇದನ್ನು ಯಾರು ಖರೀದಿಸಿದ್ದು ಎಂಬುದರ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಅದರ ಬಿಲ್​ ಗುರುಗ್ರಾಮ್‌ನ ತೋಟದ ಮನೆಯಲ್ಲಿ ವಾಸಿಸುತ್ತಿದ್ದ ದೆಹಲಿಯ ಉದ್ಯಮಿ ಅನಿಲ್ ಕುಮಾರ್ ಹೆಸರಲ್ಲಿರುವುದು ಸ್ಪಷ್ಟವಾಗಿದೆ.

ಕೊಲೆಗೈದು ನಾಟಕ

ಮೃತ ಮಹಿಳೆಯನ್ನು ಸೀಮಾ ಸಿಂಗ್ (47) ಎಂದು ಗುರುತಿಸಲಾಗಿದ್ದು, ಆರೋಪಿಯ ಹುಡುಕಾಟದಲ್ಲಿದ್ದ ಪೊಲೀಸರಿಗೆ ಕುಮಾರ್​ ಮೇಲೆ ಅನುಮಾನ ಮೂಡಿತು. ಕುಮಾರ್​ನನ್ನು ಸಂಪರ್ಕಿಸಿದಾಗ ಆತ ಸೀಮಾ ಪತ್ನಿ ಎಂಬುದು ತಿಳಿದುಬಂದಿತು. ಪೊಲೀಸರು, ನಿಮ್ಮ ಪತ್ನಿಯೊಂದಿಗೆ ಮಾತನಾಡಬಹುದಾ ಎಂದು ಕೇಳಿದಾಗ, ಅವಳು ಊರಲಿಲ್ಲ. ಫೋನ್ ಇಲ್ಲೇ ಬಿಟ್ಟು ವೃಂದಾವನಕ್ಕೆ ಹೋಗಿದ್ದಾಳೆ ಎಂದು ಹೇಳಿದ್ದ. ಇದು ಪೊಲೀಸರ ಶಂಕೆಯನ್ನು ದೃಢಪಡಿಸಿತು.

ಆರೋಪಿ ಕುಮಾರ್ ಕಚೇರಿಯಲ್ಲಿ ಪತ್ನಿಗೆ ಸಂಬಂಧಿಸಿದ ಯಾವುದಾದರೂ ದಾಖಲೆಗಳು ಸಿಗಬಹುದು ಎಂದು ಹುಡುಕಾಡಿದ ಖಾಕಿಗೆ ಅಲ್ಲಿ ಡೈರಿಯಲ್ಲಿದ್ದ ಕುಮಾರ್​ ಅತ್ತೆಯ ದೂರವಾಣಿ ಸಂಖ್ಯೆ ಕಣ್ಣಿಗೆ ಬಿದ್ದಿದೆ. ತಕ್ಷಣವೇ ಸೀಮಾ ಹೆತ್ತವರನ್ನು ಸಂಪರ್ಕಿಸಿ, ನಿಮ್ಮ ಮಗಳು ಎಲ್ಲಿದ್ದಾರೆ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಸೀಮಾ ಸಹೋದರಿ ಬಬಿತಾ, ಆಕೆ ಮಾರ್ಚ್ 11ರಿಂದ ನಮ್ಮೊಂದಿಗೆ ಮಾತನಾಡಿಲ್ಲ. ನಾವು ಚಿಂತಿತರಾಗಿದ್ದೇವೆ ಎಂದಿದ್ದಾರೆ.

ಸೀಮಾ ಹೆತ್ತವರ ಮಾತು

ಸೀಮಾ ಜೈಪುರದಲ್ಲಿದ್ದಾಳೆ. ಅವಳು ಯಾರೊಂದಿಗೂ ಮಾತನಾಡುವ ಮನಸ್ಥಿತಿಯಲ್ಲಿಲ್ಲ ಎಂದು ಆಕೆಯ ಪತಿ ಹೇಳಿದ್ದರು. ಇದನ್ನೇ ನಂಬಿಕೊಂಡು ನಾವು ಸುಮ್ಮನಿದ್ದೆವು. ಕೆಲವು ದಿನಗಳ ನಂತರ ಈ ಬಗ್ಗೆ ಕುಮಾರ್​ನನ್ನು ಕೇಳಿರಲಿಲ್ಲ. ಆದ್ರೆ, ಒಂದೆರೆಡು ವಾರಗಳು ಕಳೆದರೂ ಮಗಳು ನಮ್ಮೊಂದಿಗೆ ಮಾತನಾಡಲು ಬಯಸಲಿಲ್ಲ. ಇದರಿಂದ ಗಾಬರಿಗೊಂಡು ನಾವು ಪೊಲೀಸರಿಗೆ ದೂರು ನೀಡಲು ಮುಂದಾದೆವು. ಆಗ ಕುಮಾರ್​, ಆಕೆ ಇನ್ನು ಸ್ವಲ್ಪ ಬರಬಹುದು ಪೊಲೀಸ್​ ಠಾಣೆಗೆ ಹೋಗುವುದು ಬೇಡ ಎಂದು ತಡೆದಿದ್ದರು ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.

ಸೀಮಾಳನ್ನು ಕತ್ತು ಹಿಸುಕಿ ಕೊಂದಿರುವುದಾಗಿ ಮರಣೋತ್ತರ ಪರೀಕ್ಷೆಯ ವರದಿ ಹೇಳಿದೆ. ಹತ್ಯೆ ಪ್ರಕರಣದಡಿ ಮೃತ ಸೀಮಾ ಪತಿ ಕುಮಾರ್ ಮತ್ತು ಸೆಕ್ಯೂರಿಟಿ ಶಿವಶಂಕರ್​ನನ್ನು ಪೊಲೀಸರು ಬಂಧಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net