

ನವದೆಹಲಿ: ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿಎಲ್) ಪೈಪ್ಲೈನ್ನಿಂದ ಇಂಧನ ಕದಿಯುತ್ತಿದ್ದ ಖದೀಮನನ್ನು ದೆಹಲಿಯ ದ್ವಾರಕ ಪೊಲೀಸರು ಶುಕ್ರವಾರ ಬಂಧನ ಮಾಡಿದ್ದಾರೆ.
ಬಂಧಿತನನ್ನು ರಾಕೇಶ್ (52) ಎಂದು ಗುರುತಿಸಲಾಗಿದೆ. ಸುರಂಗವನ್ನು ತೋಡಿ ಪೈಪ್ಲೈನ್ಗೆ ಯಂತ್ರವನ್ನು ಅಳವಡಿಸಿ ಇಂಧನವನ್ನು ಕದಿಯುತ್ತಿದ್ದದ್ದು ಬೆಳಕಿಗೆ ಬಂದಿದೆ.
ಐಒಸಿಎಲ್ ಅಕ್ಟೋಬರ್ 4 ರಂದು ದೂರು ದಾಖಲಿಸಿದ ನಂತರ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದರು. ಸೆ. 29 ರಂದು ತಪಾಸಣೆ ನಡೆಸುವಾಗ ದೆಹಲಿ-ಪಾಣಿಪತ್ ವಿಭಾಗದ ಪೈಪ್ಲೈನ್ನಿಂದ ತೈಲ ಕಳ್ಳತನ ಮಾಡಲಾಗುತ್ತಿದೆ. ಪೊಚಂಪುರ್ ಗ್ರಾಮದಲ್ಲೇ ಕಳ್ಳತನ ನಡೆಯುತ್ತಿರಬಹುದು ಎಂದು ಐಒಸಿಎಲ್ ದೆಹಲಿ ಪೊಲೀಸರಿಗೆ ದೂರು ನೀಡಿತ್ತು.
ಪ್ರಕರಣ ದಾಖಲಿಸಿಕೊಂಡು ಪೊಲೀಸರು ಸ್ಥಳ ಪರಿಶೀಲನೆಗೆಂದು ಬಂದಾಗ ಪೈಪ್ಲೈನ್ನಿಂದ ಸುಮಾರು 40 ಮೀಟರ್ ದೂರದಲ್ಲಿರುವ ಭೂಮಿಯಲ್ಲಿ ಸುರಂಗ ಕೊರೆದು ಎರಡು ಪ್ಲ್ಯಾಸ್ಟಿಕ್ ಪೈಪ್ಗಳನ್ನು ಅಳವಡಿಸಿರುವುದು ಪೊಲೀಸರಿಗೆ ತಿಳಿಯಿತು. ಸುರಂಗ ಕೊರೆದ ಜಾಗ ರಾಕೇಶ್ (52) ಅವರಿಗೆ ಸೇರಿದ್ದು ಎಂಬುದು ಗೊತ್ತಾದ ಬಳಿಕ ಆತನನ್ನು ಪತ್ತೆಹಚ್ಚಿ ಬಂಧಿಸಲಾಗಿದೆ.
ಪೆಟ್ರೋಲಿಯಂ ಮತ್ತು ಮಿನರಲ್ಸ್ ಪೈಪ್‌ಲೈನ್ಸ್ (ಭೂಮಿಯಲ್ಲಿ ಬಳಕೆದಾರರ ಹಕ್ಕು ಸ್ವಾಧೀನ) ತಿದ್ದುಪಡಿ ಕಾಯ್ದೆ, ಸ್ಫೋಟಕ ವಸ್ತುಗಳ ಕಾಯ್ದೆ, ಸಾರ್ವಜನಿಕ ಆಸ್ತಿಗೆ ಹಾನಿ ತಡೆ ಕಾಯ್ದೆ, ಅಗತ್ಯ ಸರಕುಗಳ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ರಾಕೇಶ್ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದ್ದು, ಪೊಲೀಸರು ರಾಕೇಶ್ ವಿಚಾರಣೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)