ಜನನಿಬಿಡ ರಸ್ತೆಯಲ್ಲೇ ಮಹಿಳೆಗೆ ಥಳಿಸಿ, ಕ್ಯಾಬ್​ ಒಳಗೆ ನೂಕಿ ಪರಾರಿ! ಸುಮ್ಮನೆ ನೋಡುತ್ತಾ ನಿಂತಿದ್ದ ಜನರು​

Delhi Cab
Published on

ನವದೆಹಲಿ: ಪುರುಷನೊಬ್ಬ ಜನನಿಬಿಡ ರಸ್ತೆಯಲ್ಲಿ ಮಹಿಳೆಯೊಬ್ಬಳ ಮೇಲೆ ಹಲ್ಲೆ ಮಾಡಿ, ಕ್ಯಾಬ್​ ಒಳಗೆ ಬಲವಂತವಾಗಿ ನೂಕಿ, ಪರಾರಿಯಾದ ಆತಂಕಕಾರಿ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಈ ವೇಳೆ ಆರೋಪಿ ಜತೆಯಿದ್ದ ಇನ್ನೊಬ್ಬ ವ್ಯಕ್ತಿ ಸುಮ್ಮನೆ ನೋಡುತ್ತಾ ನಿಂತಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಬರಿಗಾಲಿನಲ್ಲಿರುವ ವ್ಯಕ್ತಿ, ಜನನಿಬಿಡ ರಸ್ತೆಯ ಮಧ್ಯದಲ್ಲಿ ಮಹಿಳೆಯನ್ನು ಥಳಿಸುವುದನ್ನು ವಿಡಿಯೋದಲ್ಲಿ ನೋಡಬಹುದು ಮತ್ತು ಬಲವಂತವಾಗಿ ಕ್ಯಾಬ್‌ಗೆ ತಳ್ಳುವುದು ಮತ್ತು ಕ್ಯಾಬ್‌ನೊಳಗೆ ಪದೇ ಪದೇ ಥಳಿಸುವುದು ವಿಡಿಯೋದಲ್ಲಿದೆ. ಮಹಿಳೆಯನ್ನು ಕ್ಯಾಬ್​ನಲ್ಲಿ ಎಳದುಕೊಂಡ ಬಳಿಕ ಇಬ್ಬರೂ ಕ್ಯಾಬ್‌ನೊಳಗೆ ಪ್ರವೇಶಿಸಿ ಅಲ್ಲಿಂದ ಪರಾರಿಯಾಗಿದ್ದಾರೆ. ಕ್ಯಾಬ್ ಡ್ರೈವರ್ ಸೇರಿದಂತೆ ಯಾರೊಬ್ಬರು ಮಹಿಳೆಯ ಸಹಾಯಕ್ಕೆ ಬರಲಿಲ್ಲ ಎಂಬುದು ದುರಾದೃಷ್ಟಕರ ಸಂಗತಿ.

ಪೊಲೀಸರು ವಿಡಿಯೋವನ್ನು ಗಮನದಲ್ಲಿಟ್ಟುಕೊಂಡು ಶನಿವಾರ ರಾತ್ರಿ ತನಿಖೆ ಆರಂಭಿಸಿದ್ದಾರೆ. ಹರಿಯಾಣದ ಗುರುಗ್ರಾಮ್‌ನಲ್ಲಿರುವ ಕ್ಯಾಬ್‌ನ ಮಾಲೀಕರ ನೋಂದಾಯಿತ ವಿಳಾಸಕ್ಕೆ ಪೊಲೀಸ್ ತಂಡವನ್ನು ಕಳುಹಿಸಲಾಗಿದೆ. ಶನಿವಾರ ರಾತ್ರಿ 11.30ಕ್ಕೆ ಗುರುಗ್ರಾಮ್‌ನ IFFCO ಚೌಕ್‌ನ ಸುತ್ತಲೂ ಕ್ಯಾಬ್ ಕೊನೆಯದಾಗಿ ಪತ್ತೆಯಾಗಿರುವುದಾಗಿ ಸಿಸಿಟಿವಿ ದೃಶ್ಯಾವಳಿ ತೋರಿಸಿದೆ.

ಸದ್ಯ ಕ್ಯಾಬ್ ಮತ್ತು ಚಾಲಕನನ್ನು ದೆಹಲಿ ಪೊಲೀಸರು ಪತ್ತೆಹಚ್ಚಿದ್ದಾರೆ ಮತ್ತು ಮೂವರು ಪ್ರಯಾಣಿಕರು ಎಲ್ಲಿ ಇಳಿದಿದ್ದಾರೆ ಎಂದು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ರೋಹಿಣಿಯಿಂದ ವಿಕಾಸಪುರಿಗೆ ಉಬರ್ ಆಪ್ ಮೂಲಕ ವಾಹನವನ್ನು ಬುಕ್ ಮಾಡಲಾಗಿದೆ. ಮಾರ್ಗಮಧ್ಯೆ ಇಬ್ಬರ ನಡುವೆ ವಾಗ್ವಾದ ನಡೆದು ಅದು ದೈಹಿಕ ಹಲ್ಲೆಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net