

ನವದೆಹಲಿ: ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳು ಇನ್ನು ಮುಂದೆ ಗ್ರಾಹಕರ ಮೇಲೆ ಸೇವಾ ಶುಲ್ಕ ವಿಧಿಸಲು ಸಾಧ್ಯವಾಗುವುದಿಲ್ಲ. ದೆಹಲಿ ಹೈಕೋರ್ಟ್(Delhi High Court) ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳಿಗೆ ಗ್ರಾಹಕರ ಮೇಲೆ ಸೇವಾ ಶುಲ್ಕ ವಿಧಿಸಬಾರದು ಎಂದು ನಿರ್ದೇಶನ ನೀಡಿದೆ.
ತೀರ್ಪು ನೀಡುವಾಗ, ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಅವರು ರೆಸ್ಟೋರೆಂಟ್ ಸಂಸ್ಥೆಗಳ ಎರಡು ಅರ್ಜಿಗಳನ್ನು ವಜಾಗೊಳಿಸಿ, ಗ್ರಾಹಕ ಸಂರಕ್ಷಣಾ ಕಾಯ್ದೆಯ ಉಲ್ಲಂಘನೆಯಾಗಿರುವುದರಿಂದ ರೆಸ್ಟೋರೆಂಟ್ಗಳು ಆಹಾರ ಬಿಲ್ಗಳ ಮೇಲೆ ಕಡ್ಡಾಯವಾಗಿ ಸೇವಾ ಶುಲ್ಕವನ್ನು ವಿಧಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಆಹಾರ ಬಿಲ್ಗಳ ಮೇಲೆ ಸೇವಾ ಶುಲ್ಕವನ್ನು ಕಡ್ಡಾಯವಾಗಿ ಸಂಗ್ರಹಿಸುವುದು ಗ್ರಾಹಕರ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ಹೇಳಿದೆ. ಗ್ರಾಹಕರು ಸ್ವಯಂಪ್ರೇರಣೆಯಿಂದ ಟಿಪ್ಸ್ ನೀಡುವುದನ್ನು ತಡೆಯಲು ಸಾಧ್ಯವಿಲ್ಲ, ಆದರೆ ಅವರ ಮೇಲೆ ಸೇವಾ ಶುಲ್ಕ ವಿಧಿಸುವುದು ತಪ್ಪು. ಆಹಾರ ಬಿಲ್ಗಳ ಮೇಲೆ ಸೇವಾ ಶುಲ್ಕವನ್ನು ಕಡ್ಡಾಯವಾಗಿ ಸಂಗ್ರಹಿಸುವುದು ದಾರಿತಪ್ಪಿಸುವಂತಿದೆ. ಏಕೆಂದರೆ ಇದು ಗ್ರಾಹಕರಿಗೆ ಸೇವಾ ತೆರಿಗೆ ಅಥವಾ ಜಿಎಸ್ಟಿಯಂತಹ ತೆರಿಗೆಯನ್ನು ವಿಧಿಸಲಾಗುತ್ತಿದೆ ಎಂಬ ಭಾವನೆಯನ್ನು ನೀಡುತ್ತದೆ. ಇಂತಹ ಪದ್ಧತಿ ಅನ್ಯಾಯವಾಗಿದ್ದು ಈ ಮೊತ್ತವನ್ನು ಬಿಲ್ಗೆ ಕಡ್ಡಾಯವಾಗಿ ಸೇರಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಭಾರತೀಯ ಹೋಟೆಲ್ಗಳು ಮತ್ತು ರೆಸ್ಟೋರೆಂಟ್ ಸಂಘಗಳ ಒಕ್ಕೂಟ (FHRAI) ಮತ್ತು ಭಾರತೀಯ ರಾಷ್ಟ್ರೀಯ ರೆಸ್ಟೋರೆಂಟ್ ಸಂಘ (NRAI) 2022ರಲ್ಲಿ ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸುವ ಮೂಲಕ ನ್ಯಾಯಾಲಯದ ಮೆಟ್ಟಿಲೇರಿದ್ದವು. ನ್ಯಾಯಾಲಯವು ಮಾರ್ಗಸೂಚಿಗಳನ್ನು ಎತ್ತಿಹಿಡಿದು, ಗ್ರಾಹಕರ ಕಲ್ಯಾಣಕ್ಕಾಗಿ ಸಿಸಿಪಿಎಗೆ ಠೇವಣಿ ಇಡಲು ಅರ್ಜಿದಾರರಿಗೆ ತಲಾ 1 ಲಕ್ಷ ರೂ. ದಂಡ ವಿಧಿಸಿತು. CCPA ಕೇವಲ ಸಲಹಾ ಸಂಸ್ಥೆಯಲ್ಲ, ಬದಲಾಗಿ ಅನ್ಯಾಯದ ವ್ಯಾಪಾರ ಪದ್ಧತಿಗಳನ್ನು ತಡೆಗಟ್ಟಲು ಮತ್ತು ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸಲು ಮಾರ್ಗಸೂಚಿಗಳನ್ನು ನೀಡುವ ಅಧಿಕಾರವನ್ನು ಹೊಂದಿದೆ ಎಂದು ನ್ಯಾಯಾಲಯ ಹೇಳಿದೆ.(ಏಜೆನ್ಸೀಸ್)