ಕಾರ್ಮಿಕರು, ವಿದ್ಯಾರ್ಥಿಗಳಿಂದ ಮಾಲೀಕರು ಮನೆ-ಪಿಜಿ ಬಾಡಿಗೆ ವಸೂಲಿ ಮಾಡುವಂತಿಲ್ಲ- ಖಡಕ್‌ ಆರ್ಡರ್‌

kejriwal final
Published on

ನವದೆಹಲಿ: ಯಾವುದೇ ಕಾರಣಕ್ಕೂ ಕಾರ್ಮಿಕರು ಮತ್ತು ವಿದ್ಯಾರ್ಥಿಗಳಿಂದ ಒಂದು ತಿಂಗಳು ಬಾಡಿಗೆ ವಸೂಲು ಮಾಡಬಾರದು. ಬಾಡಿಗೆ ನೀಡಲು ಅವರಿಗೆ ಕಷ್ಟವಾದರೆ ನೀಡಲೇಬೇಕು ಎಂದು ಒತ್ತಾಯಿಸಬಾರದು ಎಂದು ಮನೆ ಮಾಲೀಕರು ಹಾಗೂ ಪೇಯಿಂಗ್‌ ಗೆಸ್ಟ್‌ ಮಾಲೀಕರಿಗೆ ಖಡಕ್‌ ವಾರ್ನಿಂಗ್‌ ಕೊಟ್ಟಿದೆ ದೆಹಲಿ ಸರ್ಕಾರ.

ಈ ಹಿಂದೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಅವರು ಮಾಲೀಕರಿಗೆ ಎಚ್ಚರಿಕೆ ನೀಡಿದ್ದರೂ, ಮಾಲೀಕರು ಬಾಡಿಗೆಗೆ ಒತ್ತಾಯಿಸುತ್ತಿದ್ದಾರೆ ಎಂದು ದೂರುಗಳು ಬಂದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ. ‘ಈಗಾಗಲೇ ಒಮ್ಮೆ ಆದೇಶ ಹೊರಡಿಸಿಯಾಗಿದೆ. ಅದನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಈ ಕುರಿತು ಇನ್ನೊಂದು ಆದೇಶ ಹೊರಡಿಸಿರುವ ಕೇಜ್ರಿವಾಲ್‌, "ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಈ ವಿಷಯದ ಬಗ್ಗೆ ಜಾಗೃತಿ ಅಭಿಯಾನವನ್ನು ಕೈಗೊಳ್ಳಬೇಕು, ವಿಶೇಷವಾಗಿ ಕಾರ್ಮಿಕರು, ವಲಸೆ ಕಾರ್ಮಿಕರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಪ್ರದೇಶಗಳಲ್ಲಿ ಈ ಬಗ್ಗೆ ಸೂಚನೆ ನೀಡಬೇಕು. ಒಂದು ವೇಳೆ ಯಾರಿಗಾದರೂ ಬಾಡಿಗೆ ನೀಡುವಂತೆ ಒತ್ತಾಯ ಮಾಡುತ್ತಿದ್ದರೆ ಅಂಥವರು ಪೊಲೀಸ್ ನಿಯಂತ್ರಣ ಕೊಠಡಿಯ 100 ಸಂಖ್ಯೆಗೆ ಕರೆ ಮಾಡಬಹುದು. ಇಂಥ ಸಂದರ್ಭಗಳಲ್ಲಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು’ ಎಂದಿದ್ದಾರೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ ಕೆಲಸ ಇಲ್ಲದಾಗಿದೆ. ಕೆಲವು ಕಾರ್ಮಿಕರು ಊರುಗಳಿಗೆ ತೆರಳಲಾಗದೇ ಇದ್ದಲ್ಲಿಯೇ ಉಳಿದುಕೊಂಡಿದ್ದಾರೆ. ಅವರ ಪೈಕಿ ಹಲವರಿಗೆ ಬಾಡಿಗೆ ನೀಡಲು ಸಾಧ್ಯವಾಗುತ್ತಿಲ್ಲವಾಗಿದೆ. ಇನ್ನು ವಿದ್ಯಾರ್ಥಿಗಳದ್ದೂ ಅದೇ ಸಮಸ್ಯೆಯಾಗಿದೆ. ಅವರನ್ನು ಈಗ ಏಕಾಏಕಿ ಹೊರಕ್ಕೆ ಹಾಕಿದರೆ ಯಾವುದೇ ಸಂಚಾರ ವ್ಯವಸ್ಥೆ ಇಲ್ಲದ ಕಾರಣ, ಎಲ್ಲಿಯೂ ಹೋಗಲು ಆಗದು. ಆದ್ದರಿಂದ ಬಾಡಿಗೆ ಕೇಳಬಾರದು ಎಂದು ಈ ಹಿಂದೆಯೇ ಮುಖ್ಯಮಂತ್ರಿಗಳು ನಿರ್ದೇಶಿಸಿದ್ದರು. ಇದರ ಹೊರತಾಗಿಯೂ ಕೆಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.

ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 1,409 ಹೊಸ ಪ್ರಕರಣಗಳು ವರದಿಯಾಗಿದೆ. 41 ಮಂದಿ ಮೃತಪಟ್ಟಿದ್ದಾರೆ. (ಏಜೆನ್ಸೀಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net