

ನವದೆಹಲಿ: ಹೊಸ ವರ್ಷಕ್ಕೆ ಎಲ್ಲರು ಕಾಲಿಟ್ಟಾಗಿದೆ. ಪರಸ್ಪರ ಆತ್ಮೀಯವಾಗಿ ಶುಭಾಶಯಗಳನ್ನು ಹಂಚಿಕೊಂಡಾಗಿದೆ. ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರವೇ ಹರಿದಿದೆ. ಅವುಗಳಲ್ಲಿ ಒಂದು ಶುಭಾಶಯ ಜಾಲತಾಣದಲ್ಲಿ ವೈರಲ್ ಆಗಿದೆ. ಅದರಲ್ಲಿರುವ ವಿಶೇಷತೆ ಏನೆಂದು ತಿಳಿಯುವ ಹಂಬಲವಿದ್ದರೆ ಮುಂದೆ ಓದಿ...
ದೆಹಲಿಯ ಸರ್ವೋದಯ ಕನ್ಯಾ ವಿದ್ಯಾಲಯ ಹೆಸರಿನ ಸರ್ಕಾರಿ ಶಾಲೆಯೊಂದರ ವಿದ್ಯಾರ್ಥಿನಿಯರು ಭಾರತದ ವಿವಿಧ ಭಾಷೆಗಳಲ್ಲಿ ಹೊಸ ವರ್ಷದ ಶುಭಕೋರಿರುವುದು ನೆಟ್ಟಿಗರು ಮನಸನ್ನು ಸೆಳೆದಿದೆ. ಈ ವಿಡಯೋವನ್ನು ಮನು ಗುಲಾತಿ ಎಂಬ ಶಿಕ್ಷಕಿ ತಮ್ಮ ಜಾಲತಾಣ ಖಾತೆಯಲ್ಲಿ ಜನವರಿ 1ರಂದು ಶೇರ್ ಮಾಡಿಕೊಂಡಿದ್ದಾರೆ.
ಹಿಂದಿ ಭಾಷೆಯಿಂದ ಆರಂಭವಾಗಿ ಅಸ್ಸಾಮಿ, ಬೆಂಗಾಳಿ, ಗುಜರಾತಿ, ಕನ್ನಡ, ತೆಲುಗು, ತಮಿಳು, ನೇಪಾಳಿ, ಕಾಶ್ಮೀರಿ, ಮಲಯಾಳಂ ಸೇರಿದಂತೆ ಒಟ್ಟು 18 ಭಾಷೆಗಳಲ್ಲಿ ವಿದ್ಯಾರ್ಥಿನಿಯರು ಶುಭಕೋರಿದ್ದಾರೆ. ವಿದ್ಯಾರ್ಥಿನಿಯರಿಗೆ ಶಾಲೆಯ ಶಿಕ್ಷಕಿಯರು ಸಾಥ್ ನೀಡಿದ್ದಾರೆ.
ಈ ಬಗ್ಗೆ ಟ್ವಿಟರ್ನಲ್ಲಿ ಬರೆದುಕೊಂಡಿರುವ ಶಿಕ್ಷಕಿ ಮನು ಗುಲಾತಿ, ಹೆಮ್ಮೆಯ ದೆಹಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರು ಭಾರತದ ವಿವಿಧ ಭಾಷೆಗಳಲ್ಲಿ ಶುಭಕೋರಿದ್ದಾರೆ. ಈ ಹೊಸ ವರ್ಷ ಎಲ್ಲರ ಬಾಳಲ್ಲಿ ನವೋಲ್ಲಾಸ ತರಲಿ ಎಂದು ಬಯಸುತ್ತೇನೆಂದು ಶುಭಹಾರೈಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿರುವ ವಿಡಿಯೋವನ್ನು ಈಗಾಗಲೇ 51 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. 3 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ಸ್ ಮಾಡಿದ್ದು, 600 ಕ್ಕೂ ಹೆಚ್ಚು ರೀಟ್ವೀಟ್ ಮಾಡಿದ್ದಾರೆ.
ಈ ವಿಡಿಯೋ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗಮನವನ್ನು ಸೆಳೆದಿದ್ದು, ಐಕ್ಯತೆಯ ಸಂದೇಶದೊಂದಿಗೆ ಹೊಸ ವರ್ಷ ಅದ್ಭುತ ಆರಂಭ ಎಂದು ಚಪ್ಪಾಳೆ ತಟ್ಟಿದ್ದಾರೆ. (ಏಜೆನ್ಸೀಸ್)