

Delhi Government: ಇತ್ತೀಚೆಗಷ್ಟೇ ದೆಹಲಿ ಸರ್ಕಾರವು ಅವಧಿ ಮುಗಿದ ವಾಹನಗಳಿಗೆ ಅಂದರೆ, 15 ವರ್ಷ ಅಥವಾ ಅದಕ್ಕಿಂತ ಹಳೆಯದಾದ ಪೆಟ್ರೋಲ್ ಮತ್ತು 10 ವರ್ಷ ಅಥವಾ ಅದಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳಿಗೆ ಇಂಧನ ನಿಷೇಧವನ್ನು ಜಾರಿಗೊಳಿಸಿತು. ಇದನ್ನು ಜಾರಿಗೆ ತರುವ ಮೂಲಕ ಅನೇಕ ಹಳೆಯ ವಾಹನಗಳನ್ನು ಹೊಂದಿರುವ ಮಾಲೀಕರಿಗೆ ತಲೆಬಿಸಿ ತಂದಿಟ್ಟಿತ್ತು. ಆದರೆ, ವ್ಯಾಪಕ ಜನಾಕ್ರೋಶ ವ್ಯಕ್ತವಾದ ಹಿನ್ನಲೆ ಇದೀಗ ಸರ್ಕಾರ ತನ್ನ ಆದೇಶವನ್ನು ತಿರುಗಿಸಿದೆ.
ಕಡೆಗೂ ಸಾರ್ವಜನಿಕರ ಆಕ್ರೋಶಕ್ಕೆ ಮಣಿದ ದೆಹಲಿ ಸರ್ಕಾರ, 15 ವರ್ಷಕ್ಕಿಂತ ಹಳೆಯ ಪೆಟ್ರೋಲ್ ವಾಹನಗಳು ಮತ್ತು 10 ವರ್ಷಕ್ಕಿಂತ ಹಳೆಯ ಡೀಸೆಲ್ ವಾಹನಗಳಿಗೆ ಹೇರಿದ್ದ ಇಂಧನ ನಿಷೇಧವನ್ನು ತಾತ್ಕಾಲಿಕವಾಗಿ ಹಿಂಪಡೆದಿದೆ. ಇದರೊಟ್ಟಿಗೆ 50 ವರ್ಷಗಳ ಹಳೆಯ ವಾಹನಗಳನ್ನು ಸ್ಕ್ರ್ಯಾಪ್ಗೆ ಕಳುಹಿಸುವ ನಿರ್ಧಾರವನ್ನೂ ಸದ್ಯಕ್ಕೆ ತಡೆ ಹಿಡಿದಿದೆ. ಈ ಕುರಿತು ಪರಿಸರ ಸಚಿವರು ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ, "ತಾಂತ್ರಿಕ ಸವಾಲುಗಳು ಮತ್ತು ಸಂಕೀರ್ಣ ವ್ಯವಸ್ಥೆಗಳಿಂದಾಗಿ ಇಂಧನ ನಿಷೇಧವನ್ನು ಜಾರಿಗೊಳಿಸುವುದು ಕಷ್ಟಕರವಾಗಿದೆ. ತಮ್ಮ ಕಾರುಗಳು ಮತ್ತು ಬೈಕ್ಗಳನ್ನು ನೋಡಿಕೊಳ್ಳುವ ಜನರನ್ನು ಶಿಕ್ಷಿಸುವ ಬದಲು, ಕಳಪೆ ನಿರ್ವಹಣೆಯ ವಾಹನಗಳನ್ನು ವಶಪಡಿಸಿಕೊಳ್ಳುವ ವ್ಯವಸ್ಥೆಯನ್ನು ಶೀಘ್ರವೇ ಕಾರ್ಯರೂಪಕ್ಕೆ ತರಲಾಗುವುದು" ಎಂದು ಹೇಳಿದರು.
"ಪ್ರಸ್ತುತ ಯಾವುದೇ ಹಳೆಯ ವಾಹನಗಳನ್ನು ಮುಟ್ಟುಗೋಲು ಹಾಕುವುದಿಲ್ಲ. ಹಾಗಂತ ದೆಹಲಿಯಲ್ಲಿ ಮಾಲಿನ್ಯವನ್ನು ನಿಯಂತ್ರಿಸಲು ನಾವು ಬದ್ಧರಾಗಿಲ್ಲ ಎಂದರ್ಥವಲ್ಲ. ಇದಕ್ಕೆ ಸಂಬಂಧಿಸಿದಂತೆ ಏರ್ ಕ್ವಾಲಿಟಿ ಚೆಕ್ಗೆ ಪರಿಶೀಲನೆ ನಡೆಸಿ, ವರದಿಗಳನ್ನು ಸಲ್ಲಿಸುವಂತೆ ಆದೇಶಿಸಿದ್ದೇವೆ" ಎಂದು ಸಿರ್ಸಾ ಹೇಳಿದ್ದಾರೆ.
ಸ್ಥಳೀಯ ಇಂಧನ ಹೊರಸೂಸುವಿಕೆ ಮೂಲಗಳ ಮಾಹಿತಿಯಂತೆ ದೆಹಲಿಯಲ್ಲಿ ವಾಹನಗಳು ಅತಿ ಹೆಚ್ಚು ಮಾಲಿನ್ಯಕಾರಕಗಳಾಗಿವೆ. ದೆಹಲಿ ಮಾಲಿನ್ಯದ ಅರ್ಧಕ್ಕಿಂತ ಹೆಚ್ಚು (ಶೇ. 51) ಪಾಲು ವಾಹನಗಳಿಂದಲೇ ಇದೆ ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರ (CSE) ನವೆಂಬರ್ 2024ರಲ್ಲಿ ಬಿಡುಗಡೆ ಮಾಡಿದ ವಿಶ್ಲೇಷಣೆ ತಿಳಿಸಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ವಾಯು ಗುಣಮಟ್ಟ ನಿರ್ವಹಣಾ ಆಯೋಗ (CAQM) ದೆಹಲಿ-ಎನ್ಸಿಆರ್ನಾದ್ಯಂತ ಎಲ್ಲ ರೀತಿಯ (ಸರಕು ವಾಹಕ, ವಾಣಿಜ್ಯ, ವಿಂಟೇಜ್, ದ್ವಿಚಕ್ರ ವಾಹನಗಳು) ಜೀವಿತಾವಧಿ ಮುಗಿದ ವಾಹನಗಳ ವಿರುದ್ಧ ಕಠಿಣ ಕ್ರಮಗಳನ್ನು ಜಾರಿಗೊಳಿಸುವ ಶಾಸನಬದ್ಧ ನಿರ್ದೇಶನ ಸಂಖ್ಯೆ 89 ಅನ್ನು ಸರ್ಕಾರ ಹೊರಡಿಸಿದೆ.