

ನವದೆಹಲಿ: ಮುಂಬರುವ ದೆಹಲಿ ವಿಧಾನಸಭೆ ಚುನಾವಣೆಗೆ ಸ್ಪೈಸ್ಜೆಟ್ ವಿಮಾನ ಸಂಸ್ಥೆಯು ವಿನೂತನ ಕಾರ್ಯಕ್ಕೆ ಮುಂದಾಗಿದ್ದು, ಮತದಾನ ಮಾಡಲು ತವರಿಗೆ ಆಗಮಿಸುವ ಮತದಾರರಿಗೆ ಉಚಿತ ಟಿಕೆಟ್ ನೀಡುವುದಾಗಿ ಆಫರ್ ನೀಡಿದೆ.
ನಮ್ಮ ಶ್ರೇಷ್ಠ ಪ್ರಜಾಪ್ರಭುತ್ವದಲ್ಲಿ ನಮ್ಮ ಹಕ್ಕನ್ನು ಚಲಾಯಿಸಲು ಯಾವುದೇ ಅಡ್ಡಿಗಳು ಇರಬಾರದೆಂಬ ವಿನೂತನ ಕಲ್ಪನೆಯೊಂದಿಗೆ ಸ್ಪೈಸ್ ಡೆಮಾಕ್ರೆಸಿ (#SpiceDemocracy) ಎಂಬ ಹ್ಯಾಶ್ಟ್ಯಾಗ್ನೊಂದಿಗೆ ವಿಮಾನ ಸಂಸ್ಥೆಯು ಜಾಗೃತಿ ಕಾರ್ಯಕ್ಕೆ ಮುಂದಾಗಿದೆ. ನೀವು ದೆಹಲಿ ಮತದಾರರಾಗಿದ್ದರೆ ಸ್ಪೈಸ್ಜೆಟ್ ನೀಡಿರುವ ವೆಬ್ಸೈಟ್ ಲಿಂಕ್ನಲ್ಲಿ ನಿಮ್ಮ ಮಾಹಿತಿಯನ್ನು ನೋಂದಾಯಿಸಿಕೊಂಡು ಉಚಿತ ಟಿಕೆಟ್ ಪಡೆದುಕೊಳ್ಳಬಹುದಾಗಿದೆ ಎಂದು ಸ್ಪೈಸ್ಜೆಟ್ ಟ್ವೀಟ್ ಮೂಲಕ ತಿಳಿಸಿದೆ.
ಜನವರಿ 31ರಿಂದ ನೋಂದಣಿ ಕಾರ್ಯವನ್ನು ಆರಂಭಿಸಲಾಗಿದ್ದು, ಫೆ. 5ಕ್ಕೆ ಕೊನೆಯಾಗಲಿದೆ. ಅದಕ್ಕೂ ಮುನ್ನ ನೀವು ನೋಂದಣಿ ಮಾಡಿಕೊಂಡರೆ ಉಚಿತವಾಗಿ ವಿಮಾನ ಹಾರಾಟ ನಡೆಸುವ ಜತೆಗೆ ಪ್ರಜಾಪ್ರಭುತ್ವ ಹಕ್ಕನ್ನು ಚಲಾಯಿಸುವ ಡಬಲ್ ಅವಕಾಶ ನಿಮ್ಮದಾಗಲಿದೆ.
ಈ ಬಗ್ಗೆ ತಿಳಿಸಿರುವ ಸ್ಪೈಸ್ಜೆಟ್ ವಿಮಾನ ಸಂಸ್ಥೆಯ ಚೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಅಜಯ್ ಸಿಂಗ್, ಮತದಾನ ನಮ್ಮ ಪ್ರಜಾಪ್ರಭುತ್ವದ ಅಂಗವಾಗಿದೆ. ದುರಾದೃಷ್ಟವಶಾತ್ ಅನೇಕರು ಉದ್ಯೋಗದಿಂದಾಗಿ ಸ್ವಂತ ಮನೆಯನ್ನು ಬಿಟ್ಟು ಬೇರೆಡೆ ಜೀವನ ಸಾಗಿಸುತ್ತಿರುತ್ತಾರೆ. ಅಂತಹವರು ಮತದಾನದಲ್ಲಿ ಪಾಲ್ಗೊಳ್ಳಲು ಕೆಲವೊಮ್ಮೆ ಸಾಧ್ಯವಾಗುವುದಿಲ್ಲ. ಆದರೆ, ಸ್ಪೈಸ್ಜೆಟ್ ಈ ಬಾರಿ ಒಂದು ವಿಭಿನ್ನ ಅವಕಾಶವನ್ನು ನೀಡಿದೆ. ಭಾರತದ ಯಾವುದೇ ಮೂಲೆಯಿಂದ ನೀವು ದೆಹಲಿಗೆ ಆಗಮಿಸಬಹುದು. ಟಿಕೆಟ್ ಅನ್ನು ನಾವು ನೀಡಲಿದ್ದೇವೆ. ಈ ಮೂಲಕ ಸ್ಪೈಸ್ಜೆಟ್ ಬಲವಾದ ಭಾರತೀಯ ಪ್ರಜಾಪ್ರಭುತ್ವವನ್ನು ನಿರ್ಮಾಣ ಮಾಡಲು ಸಹಕಾರಿಯಾಗಲಿದೆ ಎಂದು ಭಾವಿಸಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)