

ನವದೆಹಲಿ: ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯ ಒಟ್ಟು 70 ಸ್ಥಾನಗಳಲ್ಲಿ 62ರಲ್ಲಿ ಗೆಲುವು ದಾಖಲಿಸುವ ಮೂಲಕ ಭರ್ಜರಿ ಬಹುಮತದೊಂದಿಗೆ ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ.
ಕಳೆದ 2015ರ ಚುನಾವಣೆಯಲ್ಲಿ 67 ಸ್ಥಾನಗಳನ್ನು ಗೆದ್ದಿದ್ದ ಆಪ್ ಈ ಬಾರಿ 4 ಸ್ಥಾನಗಳ ಹಿನ್ನಡೆ ಅನುಭವಿಸಿದರೂ ಕೂಡ ತನ್ನ ವರ್ಚಸ್ಸನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇನ್ನು ಇದೇ ಗೆಲುವಿನ ಖುಷಿಯಲ್ಲಿ ಕೇಜ್ರಿವಾಲ್ ದೆಹಲಿ ಜನತೆಗೆ ಐ ಲವ್ ಯು ಹೇಳಿ, ಸ್ಥಳೀಯ ಸಮಸ್ಯೆ ಹಾಗೂ ಸರ್ಕಾರದ ತಲುಪುವಿಕೆ ಮೇಲೆ ಗಮನ ವಹಿಸಿ, ಇದು ಹೊಸ ಬಗೆಯ ರಾಜಕಾರಣದ ಆರಂಭ ಎಂದು ದೆಹಲಿಯ ಆಪ್ ಕಚೇರಿಯಲ್ಲಿ ಘೋಷಿಸಿದರು. ಅಲ್ಲದೆ, ದೆಹಲಿ ಜನತೆಗೆ ಧನ್ಯವಾದ ತಿಳಿಸಿದರು.
ಇತ್ತ ಪ್ರತಿಷ್ಠೆಯ ಕಣವಾಗಿದ್ದ ದೆಹಲಿಯನ್ನು ಶತಾಯಗತಾಯ ಗೆಲ್ಲಲೇಬೇಕೆಂಬ ಛಲದೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ನೇತೃತ್ವದಲ್ಲಿ ಭಾರಿ ಪ್ರಚಾರ ನಡೆಸಿದ್ದ ಬಿಜೆಪಿ, ಫಲಿತಾಂಶದಲ್ಲಿ 8 ಸ್ಥಾನವನ್ನು ಗಳಿಸಿ ಮುಖಭಂಗ ಅನುಭವಿಸಿದೆ. ಕಳೆದ ಚುನಾವಣೆಯಲ್ಲಿ ಕೇವಲ 3 ಸ್ಥಾನದಲ್ಲಿ ಜಯಿಸಿದ್ದ ಬಿಜೆಪಿ ಈ ಬಾರಿ 8 ಸ್ಥಾನಗಳಲ್ಲಿ ಜಯಗಳಿಸಿ ಚೇತರಿಕೆ ಕಂಡಿದ್ದರೂ ಇದು ಹೇಳಿಕೊಳ್ಳುವಷ್ಟು ಬೆಳವಣಿಗೆಯಲ್ಲ ಎಂಬುದು ರಾಜಕೀಯ ತಜ್ಞರ ಅಭಿಪ್ರಾಯವಾಗಿದೆ.
ದೆಹಲಿಯ ಶಾಹೀನ್ ಬಾಘ್ನಲ್ಲಿ ನಡೆಯುತ್ತಿರುವ ಸಿಎಎ ವಿರೋಧಿ ಪ್ರತಿಭಟನೆಯ ಪ್ರತಿಭಟನಾಕಾರರನ್ನು ಉಲ್ಲೇಖಿಸಿ ಬಿಜೆಪಿ ನಾಯಕರು ನೀಡಿದ ಹೇಳಿಕೆಗಳು ಕೂಡ ಚುನಾವಣೆ ಮೇಲೆ ಪ್ರಭಾವ ಬೀರಿದೆ. ಅದಕ್ಕೆ ಪುಷ್ಠಿ ನೀಡುವಂತೆ ಶಾಹೀನ್ ಬಾಘ್ ಒಳಪಡುವ ಓಕ್ಲಾ ಕ್ಷೇತ್ರದಲ್ಲಿ ಆಪ್ ಅಭ್ಯರ್ಥಿ ಅಮಾನತುಲ್ಲಾ ಖಾನ್ ಅವರು ಎದುರಾಳಿ ಬಿಜೆಪಿ ಅಭ್ಯರ್ಥಿ ಬ್ರಹಮ್ ಸಿಂಗ್ ವಿರುದ್ಧ ಬರೋಬ್ಬರಿ 71,827 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಅಲ್ಲದೆ, ಕೇಜ್ರಿವಾಲ್ ಅವರನ್ನು ಭಯೋತ್ಪಾದಕ ಎಂದು ಜರಿದಿದ್ದು ಮುಂತಾದ ಹೇಳಿಕೆಗಳು ಬಿಜೆಪಿಗೆ ತಿರುಗುಬಾಣವಾಗಿದೆ ಎನ್ನಲಾಗಿದೆ.
ಬಿಜೆಪಿಯ ಭಾರಿ ಪ್ರಚಾರ ತಂತ್ರದ ನಡುವೆಯೂ ಆಪ್ ಭರ್ಜರಿ ಬಹುಮತ ಸಾಧಿಸಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಯಾವುದೇ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳದೆ, ಬದಲಾಗಿ ವಿದ್ಯುತ್, ನೀರು, ಶಿಕ್ಷಣ, ಆರೋಗ್ಯ ಮತ್ತು ಪರಿಸರ ಮುಂತಾದ ಸಮಸ್ಯೆಗಳ ಮೇಲೆ ಗಮನ ವಹಿಸಿದ್ದು ಆಪ್ ಗೆಲವಿಗೆ ಪ್ರಮುಖ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇನ್ನು ದೆಹಲಿಯಲ್ಲಿ ಈ ಹಿಂದೆ ಬಲಿಷ್ಠವಾಗಿದ್ದ ಕಾಂಗ್ರೆಸ್ 2013ರ ಬಳಿಕ ಪ್ರಬಲ ನಾಯಕತ್ವದ ಕೊರತೆಯಿಂದಾಗಿ ಹೀನಾಯ ಸ್ಥಿತಿಗೆ ತಲುಪಿದೆ. ಕಳೆದ ಬಾರಿಯೂ ಝೀರೋ ಸುತ್ತಿದ್ದ ಕಾಂಗ್ರೆಸ್ ಈ ಬಾರಿಯೂ ಅದನ್ನೇ ಮುಂದುವರಿಸಿದೆ. ಪ್ರಚಾರದ ವೇಳೆಯೂ ಛಾಪು ಮೂಡಿಸದ ಕಾಂಗ್ರೆಸ್ ಆರಂಭದಿಂದಲೇ ಸುಮ್ಮನಾಗಿದ್ದನ್ನು ನೋಡಿದರೆ ತನ್ನ ಸೋಲನ್ನು ಮೊದಲೇ ಒಪ್ಪಿಕೊಂಡಿತ್ತು ಎಂದು ಹೇಳಲಾಗಿದೆ. ರಾಜಕೀಯದಲ್ಲಿ ಸುದೀರ್ಘ ಇತಿಹಾಸ ಹೊಂದಿರುವ ಕಾಂಗ್ರೆಸ್ ಮೌಲ್ಯಮಾಪನ ಮಾಡಿಕೊಳ್ಳುವ ಸಮಯ ಇದಾಗಿದ್ದು, ಸೂಕ್ತ ನಾಯಕತ್ವದ ಆಯ್ಕೆಯನ್ನು ಮಾಡಲೇಬೇಕಾಗಿದ್ದು, ಪಕ್ಷ ಸಂಘಟನೆಗೆ ಒತ್ತು ನೀಡಬೇಕಾದ ಸಮಯವಾಗಿದೆ ಎಂಬುದನ್ನು ದೆಹಲಿ ಚುನಾವಣೆ ಮತ್ತೊಮ್ಮೆ ನೆನಪು ಮಾಡಿದೆ.
ಶೇಕಡವಾರು ಮತ ಹಂಚಿಕೆಯಲ್ಲೂ ಆಪ್ ಶೈನ್
ಈ ಬಾರಿಯು ಶೇಕಡವಾರು ಮತ ಹಂಚಿಕೆಯಲ್ಲಿ ಆಪ್ ಹೆಚ್ಚಿನ ಪಾಲನ್ನು ತನ್ನದಾಗಿಸಿಕೊಂಡಿದೆ. ಒಟ್ಟು 53.64 ರಷ್ಟು ಮತಗಳನ್ನು ಪಡೆದುಕೊಂಡಿದ್ದು, ಕಳೆದ ಬಾರಿಗೆ ಹೋಲಿಸಿದರೆ ಸಮವಾಗಿದೆ. ಇನ್ನು ಬಿಜೆಪಿ 38.46 ರಷ್ಟು ಮತಗಳನ್ನು ಪಡೆದುಕೊಂಡಿದ್ದು, ಕಳೆದ ಬಾರಿಗೆ ಹೋಲಿಸಿದರೆ ಕೊಂಚ ಚೇತರಿಕೆ ಕಂಡಿದೆ. ಇನ್ನು ಕಾಂಗ್ರೆಸ್ ಮಾತ್ರ ಕೇವಲ 4.34 ರಷ್ಟು ಮತ ಪಡೆದುಕೊಂಡಿದೆ. (ಏಜೆನ್ಸೀಸ್)