ಅಮಿತ್​ ಷಾ ವೈಫಲ್ಯದಿಂದ ದೆಹಲಿಯಲ್ಲಿ ಬಿಜೆಪಿಗೆ ಸೋಲು: ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ ಸಂಪಾದಕೀಯ

Amit sHah 13 jan 20
Published on

ಮುಂಬೈ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರ ವೈಫಲ್ಯ ಕಾರಣ ಎಂದು ಶಿವಸೇನಾ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲಿ ಬರೆದಿದೆ.

ಸೋಲಿಗೆ ಪ್ರಧಾನಿ ನರೇಂದ್ರ ಮೋದಿ ಅಥವಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಕಾರಣರಲ್ಲ. ಬದಲಾಗಿ ಅಮಿತ್​ ಷಾ ಕಾರಣ ಎಂದು ಬರೆದುಕೊಂಡಿದೆ.

ರಾಜ್ಯಗಳ ವಿಧಾನಸಭೆ ಚುನಾವಣೆಗಳು ಲೋಕಸಭೆಗಿಂತ ಭಿನ್ನವಾಗಿರುತ್ತವೆ. ಅಲ್ಲದೆ ಕಠಿಣ ಸ್ಪರ್ಧೆ ಎದುರಾಗುತ್ತದೆ. ಬಿಜೆಪಿ ವಿಧಾನಸಭೆ ಚುನಾವಣೆಗಳನ್ನು ಲೋಕಸಭೆ ಚುನಾವಣೆಯಂತೆ ಪರಿಗಣಿಸುವುದರಿಂದ ಎಲ್ಲ ರಾಜ್ಯಗಳಲ್ಲಿ ಸೋಲು ಕಾಣುತ್ತಿದೆ. ಮೋದಿಯ ವರ್ಚಸ್ಸು ಕೇಂದ್ರದಲ್ಲಿ ಅಧಿಕಾರ ತಂದುಕೊಟ್ಟಿದೆ ಎಂದು ವಿಶ್ಲೇಷಣೆ ಮಾಡಿದೆ.

ದೆಹಲಿ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಗೆಲುವು ಪಡೆದಿರುವುದು ಆಶ್ಚರ್ಯ ಅಲ್ಲ. 5 ವರ್ಷಗಳಲ್ಲಿ ಅವರು ಕೈಗೊಂಡ ಮಾದರಿ ಅಭಿವೃದ್ಧಿ ಕಾರ್ಯಕ್ರಮಗಳು ಅವರನ್ನು ಗೆಲ್ಲಿಸಿವೆ.

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಹಾಗೂ ಶಾಹೀನ್​ಬಾಗ್​ನಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಉಲ್ಲೇಖಿಸಿ ಮತದಾರರನ್ನು ಧ್ರುವೀಕರಿಸಲು ಬಿಜೆಪಿ ಮುಂದಾಯಿತು. ಕೇಂದ್ರ ಗೃಹ ಸಚಿವ ಅಮಿತ್​ ಷಾ ದೆಹಲಿಯ ಬೀದಿ ತಿರುಗಿ ಮತದಾರರಿಗೆ ಇದನ್ನೇ ಹೇಳಿದರೂ ಮತದಾರರು ಧ್ರುವೀಕರಣಗೊಳ್ಳದೆ ಅಭಿವೃದ್ಧಿಗೆ ಮತ ಹಾಕಿದ್ದಾರೆ ಎಂದು ಸಾಮ್ನಾದಲ್ಲಿ ಬರೆಯಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net