

ನವದೆಹಲಿ : ಒಂದು ತಿಂಗಳಿಗೂ ಹೆಚ್ಚು ಸಮಯದ ನಂತರ ಮೊದಲ ಬಾರಿಗೆ ದೆಹಲಿಯ ನಿತ್ಯ ಕರೊನಾ ಪ್ರಕರಣಗಳ ಸಂಖ್ಯೆ ಇದೀಗ 10,000 ಕ್ಕಿಂತ ಕೆಳಗಿಳಿದಿದೆ. ಇಂದು ಬಂದ ಕಳೆದ 24 ಗಂಟೆಗಳ ವರದಿಯಲ್ಲಿ 8,500 ಹೊಸ ಪ್ರಕರಣಗಳು ದಾಖಲಾಗಿರುವುದು ಕಂಡುಬಂದಿದ್ದು, ಪಾಸಿಟಿವಿಟಿ ದರವು ಶೇ.12 ಕ್ಕೆ ಇಳಿದಿದೆ.
ಏಪ್ರಿಲ್ 10 ರ ನಂತರ ಸೋಂಕಿನ ಸಂಖ್ಯೆಯು 10,000 ಕ್ಕೂ ಮೀರಿ ಬೆಳೆದಿದ್ದು, ಏಪ್ರಿಲ್ 20 ರಂದು ದಾಖಲೆ 28,000 ಪ್ರಕರಣಗಳ ಮಟ್ಟ ತಲುಪಿದ್ದವು. ಕರೊನಾ ಸೋಂಕಿಗೆ ತತ್ತರಿಸಿದ ದೆಹಲಿಯಲ್ಲಿ ಚಿಕಿತ್ಸಕ ಆಮ್ಲಜನಕ, ಔಷಧಿ ಮತ್ತು ವೈದ್ಯಕೀಯ ಸೌಲಭ್ಯಗಳಿಗಾಗಿ ಹಾಹಾಕಾರ ಎದುರಾಗಿತ್ತು.
ಇಂದು ಈ ಬಗ್ಗೆ ವೆಬ್ಕ್ಯಾಸ್ಟ್ನ ಮೂಲಕ ತಿಳಿಸಿದ ಸಿಎಂ ಅರವಿಂದ್ ಕೇಜ್ರಿವಾಲ್ ಅವರು, ದೆಹಲಿಯಲ್ಲಿ ಕರೊನಾದಿಂದಾಗಿ ತಂದೆತಾಯಿಯನ್ನು ಕಳೆದುಕೊಂಡಿರುವ ಮಕ್ಕಳನ್ನು ಬೆಳೆಸುವ ಮತ್ತು ವಿದ್ಯಾಭ್ಯಾಸ ನೀಡುವ ಖರ್ಚನ್ನು ದೆಹಲಿ ಸರ್ಕಾರ ವಹಿಸಲಿದೆ ಎಂದು ಹೇಳಿದರು.
“ಕಳೆದ ಕೆಲವು ದಿನಗಳಲ್ಲಿ 3,000 ಆಸ್ಪತ್ರೆ ಬೆಡ್ಗಳು ಖಾಲಿಯಾಗಿವೆ. ಆದರೆ ಐಸಿಯು ಬೆಡ್ಗಳು ಇನ್ನೂ ತುಂಬಿವೆ. ಅಂದರೆ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಸಂಖ್ಯೆ ಇನ್ನೂ ಹೆಚ್ಚಿದೆ. ನಾವು 1,200 ಹೊಸ ಐಸಿಯು ಬೆಡ್ಗಳನ್ನು ಸಿದ್ಧಗೊಳಿಸುತ್ತಿದ್ದು, ಒಂದೆರಡು ದಿನಗಳಲ್ಲಿ ಅವು ಲಭ್ಯವಾಗಲಿವೆ" ಎಂದು ಕೇಜ್ರಿವಾಲ್ ಹೇಳಿದರು. (ಏಜೆನ್ಸೀಸ್)