

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆದ ಗಲಭೆಗೆ ಸಂಚು ರೂಪಿಸಿದ ಆರೋಪದ ಮೇಲೆ ಜೈಲು ಸೇರಿರುವ ಆರೋಪಿ ಉಮರ್ ಖಾಲಿದ್‌ಗೆ ಬಿಗ್ ರಿಲೀಫ್ ಸಿಕ್ಕಿದೆ. ಕರ್ಕರ್ದೂಮ ಕೋರ್ಟ್ ಉಮರ್ ಖಾಲಿದ್‌ಗೆ(Umar Khalid) ಬುಧವಾರ(ಡಿಸೆಂಬರ್ 18) ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಫೆಬ್ರವರಿ 2020ರಲ್ಲಿ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ ಪ್ರಮುಖ ಪಿತೂರಿ ಎಂಬ ಆರೋಪ ಉಮರ್ ಖಾಲಿದ್ ಮೇಲಿದೆ.
ಡಿಸೆಂಬರ್ 28 ರಿಂದ ಜನವರಿ 3 ರವರೆಗೆ ತನ್ನ ಸೋದರ ಸಂಬಂಧಿಯ ವಿವಾಹದಲ್ಲಿ ಪಾಲ್ಗೊಳ್ಳಲು ಉಮರ್ ಖಾಲಿದ್ 10 ದಿನಗಳ ಮಧ್ಯಂತರ ಜಾಮೀನು ಕೋರಿದ್ದರು. ಆದರೆ ನ್ಯಾಯಾಲಯವು 7 ದಿನಗಳ ಮಧ್ಯಂತರ ಜಾಮೀನು ನೀಡಿದೆ. ಕಳೆದ ನಾಲ್ಕು ವರ್ಷಗಳಿಂದ ಉಮರ್ ಖಾಲಿದ್ ಜೈಲಿನಲ್ಲಿದ್ದಾನೆ. ದೆಹಲಿ ಗಲಭೆಗೆ ಸಂಚು ರೂಪಿಸಿದ ಆರೋಪ ಖಾಲಿದ್ ಮೇಲಿದೆ. ಇದಾದ ಬಳಿಕ ಅವರ ವಿರುದ್ಧ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಉಮರ್ ಖಾಲಿದ್ ಅವರನ್ನು ಸೆಪ್ಟೆಂಬರ್ 2020ರಲ್ಲಿ ಬಂಧಿಸಲಾಯಿತು. ಕ್ರಿಮಿನಲ್ ಪಿತೂರಿ, ಗಲಭೆ, ಕಾನೂನುಬಾಹಿರ ಸಭೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಹಲವಾರು ಇತರ ಅಪರಾಧಗಳ ಆರೋಪ ಹೊರಿಸಲಾಯಿತು. ಅವರು 2020 ರಿಂದ ಜೈಲಿನಲ್ಲಿದ್ದಾನೆ. ಉಮರ್ ಖಾಲಿದ್ ಅವರ ಜಾಮೀನು ಅರ್ಜಿಯ ಎರಡನೇ ಸುತ್ತಿನ ವಿಚಾರಣೆ ಇದಾಗಿದೆ. ಕೆಳ ನ್ಯಾಯಾಲಯವು ಮಾರ್ಚ್ 2022ರಲ್ಲಿ ಮೊದಲ ಬಾರಿಗೆ ಅವರಿಗೆ ಜಾಮೀನು ನೀಡಲು ನಿರಾಕರಿಸಿತ್ತು. ಇದರ ನಂತರ ಉಮರ್ ಖಾಲಿದ್ ಹೈಕೋರ್ಟ್ ಮೆಟ್ಟಿಲೇರಿದರು, ಆದರೆ ನ್ಯಾಯಾಲಯವು ಅಕ್ಟೋಬರ್ 2022ರಲ್ಲಿ ಪರಿಹಾರ ನೀಡಲು ನಿರಾಕರಿಸಿತು.
ಬಳಿಕ ಮೇ 2023ರಲ್ಲಿ ಉಮರ್ ಖಾಲಿದ್ ಸುಪ್ರೀಂ ಕೋರ್ಟ್ ಮೊರೆ ಹೋದರು. ಅರ್ಜಿಯ ವಿಚಾರಣೆಯನ್ನು ಹಲವು ಬಾರಿ ಮುಂದೂಡಲಾಗಿತ್ತು. ನಂತರ ಪರಿಸ್ಥಿತಿಯಲ್ಲಿ ಬದಲಾವಣೆಯನ್ನು ಉಲ್ಲೇಖಿಸಿ ಉಮರ್ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಅರ್ಜಿಯನ್ನು ಹಿಂತೆಗೆದುಕೊಂಡರು. ಪರಿಸ್ಥಿತಿಯ ಬದಲಾವಣೆಯಿಂದಾಗಿ ನಾವು ಅರ್ಜಿಯನ್ನು ಹಿಂಪಡೆಯಲು ಬಯಸುತ್ತೇವೆ ಮತ್ತು ಸೂಕ್ತ ಪರಿಹಾರಕ್ಕಾಗಿ ವಿಚಾರಣಾ ನ್ಯಾಯಾಲಯವನ್ನು ಸಂಪರ್ಕಿಸಲು ಬಯಸುತ್ತೇವೆ ಎಂದು ಒಮರ್ ಪರ ವಕೀಲ ಹೇಳಿದ್ದರು.
ದೆಹಲಿ ಗಲಭೆಯಲ್ಲಿ 53 ಜನರು ಮೃತಪಟ್ಟಿದ್ದರು ಮತ್ತು 700ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಗಲಭೆಗಳಲ್ಲಿ ಅನೇಕ ಅಂಗಡಿಗಳು ಮತ್ತು ಮನೆಗಳು ಸುಟ್ಟುಹೋಗಿವೆ.(ಏಜೆನ್ಸೀಸ್)