

ನವದೆಹಲಿ: ಅತ್ತ ಪಾಕಿಸ್ತಾನ-ಚೀನಾ ಜತೆಯಾಗಿ ದಾಳಿ ಮಾಡಿದರೂ ಎದುರಿಸಲು ಸಿದ್ಧ ಎಂದು ಭಾರತೀಯ ಸೇನೆ ಹೇಳಿದ ಬೆನ್ನಿಗೇ ಇತ್ತ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೂಡ ಯುದ್ಧ ಸಾರಿದ್ದಾರೆ. ಹಾಗಂತ ಇದು ಗುಂಡು-ಫಿರಂಗಿಗಳ ಸಹಿತ ಯುದ್ಧವಲ್ಲ, ಇದಕ್ಕೆ ಮೊಬೈಲ್ಫೋನ್ ತಂತ್ರಾಂಶವೇ ಆಯುಧ!
ಅಂದಹಾಗೆ ರಾಷ್ಟ್ರ ರಾಜಧಾನಿಯ ಮುಖ್ಯಮಂತ್ರಿ ಯುದ್ಧ ಸಾರಿರುವುದು ಪರಿಸರ ಮಾಲಿನ್ಯದ ಯುದ್ಧ. 'ಯುದ್ಧ್ ಪ್ರದೂಷಣ್ ಕೆ ವಿರುದ್ಧ್' ಎಂಬ ಘೋಷವಾಕ್ಯದೊಂದಿಗೆ ಮಾಲಿನ್ಯ ತಡೆಗೆ ಮುಂದಾಗಿರುವ ಕೇಜ್ರಿವಾಲ್, ಅದಕ್ಕೆಂದೇ 'ಗ್ರೀನ್ ದೆಹಲಿ' ಆ್ಯಪ್ ರೂಪಿಸಿದ್ದಾರೆ.
ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಇಂಥದ್ದೊಂದು ಹೋರಾಟಕ್ಕೆ ಸೋಮವಾರ ಚಾಲನೆ ನೀಡಿರುವ ದೆಹಲಿ ಸಿಎಂ, ಪರಿಸರ ಮಾಲಿನ್ಯ ಉಂಟಾಗುವಂಥ ಚಟುವಟಿಕೆಗಳು ಕಂಡು ಬಂದಲ್ಲಿ ಸಾರ್ವಜನಿಕರು ಒಂದು ಫೋಟೋ ತೆಗೆದು 'ಗ್ರೀನ್ ದೆಹಲಿ' ಆ್ಯಪ್ ಮೂಲಕ ದೂರು ದಾಖಲಿಸಬಹುದು. ಇವತ್ತೇ ಈ ಅಭಿಯಾನ ಆರಂಭವಾಗಿದ್ದು, ಕೂಳೆ ಸುಡುವುದು ಮುಂತಾದ ಮಾಲಿನ್ಯಕಾರಿ ಚಟುವಟಿಕೆಗಳ ಬಗ್ಗೆ ಜನರು ಗಮನ ಸೆಳೆದರೆ ಅಧಿಕಾರಿಗಳು ಕ್ರಮ ಜರುಗಿಸುತ್ತಾರೆ. ಅಲ್ಲದೆ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ರಾಜ್ಯದಲ್ಲಿ 13 ಹಾಟ್ಸ್ಪಾಟ್ಗಳನ್ನು ಗುರುತಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. (ಏಜೆನ್ಸೀಸ್)