ದೆಹಲಿ ಕಾರು ಸ್ಫೋಟ: ಅಲ್​-ಫಲಾಹ್ ವಿಶ್ವವಿದ್ಯಾಲಯದ ಮೂವರು ವೈದ್ಯರನ್ನು ವಶಕ್ಕೆ ಪಡೆದ NIA

ವಿಜಯವಾಣಿ - 2025-11-11T171533.616
Published on: 

ನವದೆಹಲಿ: ಐತಿಹಾಸಿಕ ದೆಹಲಿಯ ಕೆಂಪುಕೋಟೆ ಬಳಿ ಸೋಮವಾರ ಸಂಜೆ ನಡೆದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ರಾಷ್ಟ್ರೀಯ ತನಿಖಾ ದಳ(NIA) ಅಧಿಕಾರಿಗಳು ಇಂದು(ನ. 11) ಫರಿದಾಬಾದ್​ನ ಅಲ್​-ಫಲಾಹ್ ವಿಶ್ವವಿದ್ಯಾಲಯದ ಮೂವರು ವೈದ್ಯರನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ಇಂದು ಬೆಳಗ್ಗೆ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದ ದೆಹಲಿ ಅಪರಾಧ ವಿಭಾಗದ ಪೊಲೀಸ್ ಅಧಿಕಾರಿಗಳು ಕ್ಯಾಂಪಸ್​ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಫರಿದಾಬಾದ್​ನಿಂದ ಬೃಹತ್ ಸ್ಫೋಟಕಗಳು ಸಾಗಾಣೆಯ ಬಳಿಕ ದೆಹಲಿಯಲ್ಲಿ ಸ್ಫೋಟದಲ್ಲಿ ಕೇಳಿಬಂದಿರುವ ಶಂಕಿತ ವೈದ್ಯರ ಬಗ್ಗೆ ಕ್ಯಾಂಪಸ್​ನಲ್ಲಿ ಮಾಹಿತಿ ಪಡೆದುಕೊಂಡಿದ್ದಾರೆ.

ಮುಜಮ್ಮಿಲ್ ಶಕೀಲ್, ಉಮರ್ ಮೊಹಮ್ಮದ್ ಹಾಗೂ ಶಾಹೀನ್ ಶಾಹಿದ್ ಬಂಧಿತ ವೈದ್ಯರಾಗಿದ್ದು ಶಂಕಿತ ಉಗ್ರರಾಗಿದ್ದಾರೆ. ಮುಜಮ್ಮಿಲ್ ಮತ್ತು ಉಮರ್ ಕಾಶ್ಮೀರದವರಾಗಿದ್ದು, ಶಾಹೀನ್ ಲಖನೌದವರು. ಮೂವರೂ ಫರಿದಾಬಾದ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತನಿಖಾಧಿಕಾರಿಗಳು ಕಂಡುಕೊಂಡಿದ್ದಾರೆ.

ಫರಿದಾಬಾದ್‌ನಲ್ಲಿ ಭಾರಿ ಪ್ರಮಾಣದ ಸ್ಫೋಟಕಗಳು ಪತ್ತೆಯಾಗಿದ್ದ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಮುಜಮ್ಮಿಲ್ ಹೆಸರು ಕೇಳಿಬಂದಿತ್ತು. ಮುಜಮ್ಮಿಲ್ ಫರಿದಾಬಾದ್‌ನಲ್ಲಿ ಬಾಡಿಗೆಗೆ ಪಡೆದಿದ್ದ ಎರಡು ಕೊಠಡಿಗಳಿಂದ ಬಾಂಬ್ ತಯಾರಿಕೆಯಲ್ಲಿ ಬಳಸಲಾದ ಸುಮಾರು 2,900 ಕೆಜಿ ವಸ್ತುಗಳು ಮತ್ತು ಇತರ ಅನುಮಾನಾಸ್ಪದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಎರಡೂ ಕೋಣೆಗಳಲ್ಲದೇ ಅಲ್​-ಫಲಾಹ್ ವಿಶ್ವವಿದ್ಯಾಲಯದಲ್ಲಿ ಮುಜಮ್ಮಿಲ್ ಸಹೋದ್ಯೋಗಿ ಶಾಹೀನ್ ಶಾಹಿದ್​ಗೆ ಸೇರಿದ ಕಾರಿನಲ್ಲಿ ಬಂದೂಕು, ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಜೈಶ್-ಎ-ಮೊಹಮ್ಮದ್ ಮಹಿಳಾ ವಿಭಾಗವಾದ ಜಮಾತ್ ಉಲ್-ಮೊಮಿನಾತ್‌ನ ಭಾರತ ಶಾಖೆಯನ್ನು ಸ್ಥಾಪಿಸುವ ಕೆಲಸವನ್ನು ಶಾಹಿದ್‌ಗೆ ವಹಿಸಲಾಗಿತ್ತು ಎಂದು ತನಿಖೆ ವೇಳೆ ಕಂಡು ಬಂದಿದೆ.

ಉಮರ್ ಮೊಹಮ್ಮದ್ ಕೂಡ ಅಲ್-ಫಲಾಹ್‌ನಲ್ಲಿ ಕೆಲಸ ಮಾಡುತ್ತಿದ್ದ ಮತ್ತು ಮುಜಮ್ಮಿಲ್‌ನ ಆಪ್ತ ಸಹಚರನಾಗಿದ್ದ ಎಂದು ತಿಳಿದುಬಂದಿದೆ. ಟ್ರಾಫಿಕ್ ಸಿಗ್ನಲ್ ಬಳಿ ಸ್ಫೋಟಗೊಂಡ ಹುಂಡೈ ಐ20 ಕಾರನ್ನು ಅವನೇ ಚಲಾಯಿಸುತ್ತಿದ್ದ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಭದ್ರತಾ ಸಂಸ್ಥೆಗಳು ಮುಜಮ್ಮಿಲ್ ಮೇಲೆ ದಾಳಿ ನಡೆಸಿ ಬೃಹತ್ ಪ್ರಮಾಣದ ಚೇತರಿಕೆ ಮಾಡಿದ ನಂತರ ಉಮರ್ ಆತ್ಮಹತ್ಯಾ ದಾಳಿ ನಡೆಸಲು ನಿರ್ಧರಿಸಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. (ಏಜೆನ್ಸೀಸ್)