ಕೊರೊನಾ ವೈರಸ್​ ಹರಡುವಿಕೆ ತಡೆಯಲು ದೆಹಲಿಯ ಸರ್ಕಾರಿ ಬಸ್​, ಮೆಟ್ರೋ ರೈಲು, ಆಸ್ಪತ್ರೆ ಸ್ವಚ್ಛಕ್ಕೆ ಸಿಎಂ ಕೇಜ್ರಿವಾಲ್​ ಸೂಚನೆ

arvind 8 mar 20
Published on

ನವದೆಹಲಿ: ದೆಹಲಿ ಸಾರಿಗೆ ಸಂಸ್ಥೆ ಬಸ್​, ಕ್ಲಷ್ಟರ್​ ಬಸ್​, ಮೆಟ್ರೋ ಹಾಗೂ ಆಸ್ಪತ್ರೆಗಳನ್ನುಪ್ರತಿ ದಿನ ಸ್ವಚ್ಛಗೊಳಿಸಿ ಸೋಂಕು ನಿವಾರಿಸುವಂತೆ ಆದೇಶ ನೀಡಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಹೇಳಿದರು.

ನಗರದಲ್ಲಿ ಕೊರೊನಾ ವೈರಸ್​ ಹರಡುವಿಕೆ ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ. ವೈರಸ್​ ಬಗ್ಗೆ ಜನರು ಭಯಪಡುವುದು ಬೇಡ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಇದುವರೆಗೆ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಮೂರು ಮಂದಿಯಲ್ಲಿ ಕೊರೊನಾ ವೈರಸ್​ ಪತ್ತೆಯಾಗಿದೆ. ಮತ್ತೊಬ್ಬರಲ್ಲಿ ವೈರಸ್​ ಹರಡಿರುವ ಶಂಕೆ ವ್ಯಕ್ತವಾಗಿ ಅವರ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದರು.

ವೈರಸ್​ ಸೋಂಕು ಹರಡಿದವರ ಚಿಕಿತ್ಸೆಗಾಗಿ 25 ಆಸ್ಪತ್ರೆಗಳಲ್ಲಿ 168 ಪ್ರತ್ಯೇಕ ಹಾಸಿಗೆಗಳನ್ನು ಸ್ಥಾಪಿಸಲಾಗಿದೆ. ಕಳೆದ 14 ದಿನಗಳಲ್ಲಿ ತಮ್ಮ ನೆರೆಯವರು ವಿದೇಶಗಳಿಂದ ದೆಹಲಿಗೆ ಹಿಂದಿರುಗಿದ್ದರೆ ಅವರ ಬಗ್ಗೆ ಮಾಹಿತಿ ನೀಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.

ಸೋಂಕು ಪತ್ತೆಯಾಗಿರುವ ಮೊದಲ ವ್ಯಕ್ತಿ 14 ದಿನಗಳ ಹಿಂದೆ 105 ಮಂದಿಯ ಸಂಪರ್ಕಕ್ಕೆ ಬಂದಿದ್ದರು, 2ನೇ ವ್ಯಕ್ತಿ 168 ಮಂದಿ ಹಾಗೂ 3ನೇ ಸೋಂಕು ಪೀಡಿತ ವ್ಯಕ್ತಿ 64 ಮಂದಿಯ ಸಂಪರ್ಕಕ್ಕೆ ಬಂದಿದ್ದರು. ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಪತ್ತೆ ಮಾಡಿ ಅವರನ್ನು ತಪಾಸಣೆಗೆ ಒಳಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net