

ನವದೆಹಲಿ: ತನ್ನ ಮೇಲೆ ಪ್ರತಿನಿತ್ಯ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಶಿಕ್ಷಕನನ್ನು ಅಪ್ರಾಪ್ತ ವಯಸ್ಕನೋರ್ವ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯ ಜಾಮಿಯಾನಗರದಲ್ಲಿ ನಡೆದಿದೆ. ಪ್ರಕರಣ ಸಂಬಂಧ ಪೊಲೀಸರು 14 ವರ್ಷದ ಬಾಲಕನನ್ನು ಬಂಧಿಸಿದ್ದಾರೆ.
ಜಾಮಿಯಾ ನಗರದಲ್ಲಿ ಟುಟೋರಿಯಲ್ಸ್ ನಡೆಸುತ್ತಿದ್ದ ವಸೀಂ(28) ಕೊಲೆಯಾದವರು ಎಂದು ತಿಳಿದು ಬಂದಿದೆ. ಇದಲ್ಲದೇ ವಸೀಂ ವಿಡಿಯೋವನ್ನು ಚಿತ್ರೀಕರಿಸಿ ವೈರಲ್ ಮಾಡುವುದಾಗಿ ಬಾಲಕನಿಗೆ ಬೆದರಿಸುತ್ತಿದ್ದ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಸೌತ್ ಡಿಸಿಪಿ ರಾಜೇಶ್ ಡಿಯೋ ಆಗಸ್ಟ್ 30ರಂದು ಮಧ್ಯಾಹ್ನ 2:15ರ ಸುಮಾರಿಗೆ ಕಂಟ್ರೋಲ್ ರೂಂಗೆ ವ್ಯಕ್ತಿಯೊಬ್ಬರ ಕೊಲೆಯಾಗಿರುವ ಬಗ್ಗೆ ಕರೆ ಬಂದಿತ್ತು. ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿತ್ತು.
ಪ್ರಾಥಮಿಕ ತನಿಖೆ ವೇಳೆ ಆತ ಸಲಿಂಗಕಾಮಿ ಎಂಬ ವಿಚಾರ ಬೆಳಕಿಗೆ ಬಂದಿತ್ತು. ತನ್ನ ಟುಟೋರಿಯಲ್ಸ್ಗೆ ಬರುತ್ತಿದ್ದ ಬಾಲಕನ ಮೇಲೆ ವಸೀಂ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿ ಕೃತ್ಯವನ್ನು ಮೊಬೈಲ್ ಫೋನಿನಲ್ಲಿ ಚಿತ್ರೀಕರಿಸಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ. ಘಟನೆ ನಡೆದ ದಿನವೂ ವಸೀಂ ಬಾಲಕನಿಗೆ ಕರೆ ಮಾಡಿ ತಾನಿದ್ದ ಮನೆಗೆ ಕರೆಸಿಕೊಂಡಿದ್ದು, ವಿಡಿಯೋ ತೋರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಇದರಿಂದ ಸಿಟ್ಟಿಗೆದ್ದ ಬಾಲಕ ಪಕ್ಕದಲ್ಲಿದ್ದ ಪೇಪರ್ ಕಟರ್ನಿಂದ ಆತನ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಬಳಿಕ ವಸೀಂ ಬಳಸುತ್ತಿದ್ದ ಮೊಬೈಲ್ ಫೋನ್, ಬಟ್ಟೆ ಹಾಗೂ ಶೂಗಳನ್ನು ದೋಚಿ ಬಾಲಕ ಪರಾರಿಯಾಗಿದ್ದಾನೆ. ಆರೋಪಿಯ ಹೇಳಿಕೆ ಪಡೆಯಲಾಗಿದ್ದು, ಆತನನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದೆ ಎಂದು ದೆಹಲಿ ಸೌತ್ ಡಿಸಿಪಿ ರಾಜೇಶ್ ಡಿಯೋ ತಿಳಿಸಿದ್ದಾರೆ.