ಪತ್ನಿಗೆ ತಲಾಖ್​ ಹೇಳಿ ಲಂಡನ್​ಗೆ ಹೊರಟಿದ್ದ ದೆಹಲಿಯ ಡಾಕ್ಟರ್​ ಬೆಂಗಳೂರಲ್ಲಿ ಬಂಧನ!

Arrest
Published on

ಬೆಂಗಳೂರು: ದೆಹಲಿಯ ವೈದ್ಯರೊಬ್ಬರು ಪತ್ನಿಗೆ ತಲಾಖ್ ಹೇಳಿ ಲಂಡನ್​ಗೆ ಹೊರಡಲು ಮುಂದಾಗಿದ್ದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಬಂಧಿಸಲ್ಪಟ್ಟಿದ್ದಾರೆ. ಆರೋಪಿ ವೈದ್ಯರನ್ನು ದೆಹಲಿ ಪೊಲೀಸರು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

40 ವರ್ಷದ ಈ ವೈದ್ಯರು ತನ್ನ 36 ವರ್ಷದ ಪತ್ನಿಗೆ ಅ.13ರಂದು ಮೂರು ಸಲ ತಲಾಖ್​ ಹೇಳುವ ಮೂಲಕ ಕಾನೂನುಬಾಹಿರವಾಗಿ ವಿಚ್ಛೇದನ ನೀಡಿದ್ದರು. ಈ ಕುರಿತು ಪತ್ನಿ ಫೆ. 1ರಂದು ದೆಹಲಿಯ ಪೊಲೀಸ್ ಠಾಣೆಯೊಂದರಲ್ಲಿ ದೂರು ನೀಡಿದ್ದರಿಂದ ವಿಷಯ ಬಹಿರಂಗಗೊಂಡಿದೆ.

ತಾನು ಈತನನ್ನು 2018ರಲ್ಲಿ ಭೇಟಿಯಾಗಿದ್ದು, ನಾವು 2020ರಲ್ಲಿ ಮದುವೆ ಆದೆವು. ತಾನು ವೈದ್ಯನಾಗಿದ್ದು, ವಿದೇಶದ ವೈದ್ಯಕೀಯ ಪರೀಕ್ಷೆಗೆ ತಯಾರಾಗುತ್ತಿರುವುದಾಗಿಯೂ ಹೇಳಿದ್ದ. ಮದುವೆಯಾದ ಕೆಲವು ತಿಂಗಳ ಬಳಿಕ ಅಧ್ಯಯನದ ಸಲುವಾಗಿ ದೆಹಲಿಯ ಇನ್ನೊಂದು ಪ್ರದೇಶದಲ್ಲಿ ಮನೆ ಮಾಡಿದ್ದ. ಆದರೆ ಕಳೆದ ಅ. 13ರಂದು ಈತ ಅಲ್ಲಿ ವೈದ್ಯೆಯೊಬ್ಬಳ ಜತೆ ವಾಸಿಸುತ್ತಿರುವುದು ನನಗೆ ಗೊತ್ತಾಯಿತು. ಆಕೆಯ ಬಗ್ಗೆ ಕೇಳಿದಾಗೆಲ್ಲ ನನಗೆ ಹೊಡೆದು ಹಿಂಸಿಸುತ್ತಿದ್ದ ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾಳೆ.

ಮುಸ್ಲಿಮರಲ್ಲಿ ಇರುವ ತ್ರಿಪಲ್ ತಲಾಖ್ ಪದ್ಧತಿ ಕಾನೂನು ಬಾಹಿರ ಎಂಬ ಕಾನೂನನ್ನು 2019ರಲ್ಲಿ ತರಲಾಗಿದೆ. ಈ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ಜಾಡು ಪತ್ತೆ ಹಚ್ಚಿ ಫೆ. 9ರಂದು ಬೆಂಗಳೂರು ವಿಮಾನನಿಲ್ದಾಣದಲ್ಲಿ ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net