

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಮತದಾನವು ಒಂದಷ್ಟು ಗೊಂದಲಗಳನ್ನು ಹೊರತುಪಡಿಸಿದರೆ ಬಹುತೇಕ ಶಾಂತಿಯುತವಾಗಿ ಅಂತ್ಯಗೊಂಡಿದೆ. ಸಂಜೆ ಆರು ಗಂಟೆಗೆ ಮುಕ್ತಾಯವಾದ ಮತದಾನದಲ್ಲಿ ಶೇ. 54.65ರಷ್ಟು ಮತ ಚಲಾವಣೆಯಾಗಿದೆ. ಒಟ್ಟು 1.46 ಕೋಟಿ ಮಂದಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ ಎಂದು ತಿಳಿದುಬಂದಿದೆ.
ಸರದಿ ಸಾಲಿನಲ್ಲಿದ್ದ ಮತದಾರರಿಗೆ ಸಂಜೆ 6.30ರವರೆಗೂ ಮತ ಚಲಾಯಿಸಲು ಅನುವು ಮಾಡಿಕೊಡಲಾಗಿತ್ತು. 2015ರ ಕಳೆದ ಬಾರಿಯ ಚುನಾವಣೆಯಲ್ಲಿ ಶೇ 67.12 ರಷ್ಟು ಮತದಾನವಾಗಿತ್ತು. ಕಳೆದ ಬಾರಿಗೆ ಹೋಲಿಸಿದರೆ, ಈ ಬಾರಿ ನೀರಸ ಮತದಾನವಾಗಿದೆ.
ಈಗಾಗಲೇ ಎರಡು ಬಾರಿ ದೆಹಲಿ ಗದ್ದುಗೆಯನ್ನು ಹಿಡಿದಿರುವ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವೂ ಮೂರನೇ ಅವಧಿಯ ಕನಸು ಕಾಣುತ್ತಿದೆ. ಇತ್ತ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿದ್ದು, ಅಧಿಕಾರವನ್ನು ಮರಳಿ ಪಡೆಯುವ ತವಕದಲ್ಲಿದ್ದೆ. ಕಾಂಗ್ರೆಸ್ ಮಾತ್ರ ಅಸ್ಥಿತ್ವ ಉಳಿಸಿಕೊಳ್ಳಲು ಶ್ರಮ ಪಡುತ್ತಿದೆ. ಹೀಗಾಗಿ ಈ ಬಾರಿಯ ದೆಹಲಿ ಚುನಾವಣೆ ಆಪ್ ಮತ್ತು ಬಿಜೆಪಿ ನಡುವಿನ ಜಿದ್ದಾಜಿದ್ದಿಯಾಗಿದ್ದು, ಈ ಹೋರಾಟದಲ್ಲಿ ಗೆಲುವು ಯಾರಿಗೆ ಎಂಬುದು ಫೆ. 11ರ ಫಲಿತಾಂಶ ದಿನದಂದು ಅಧಿಕೃತವಾಗಿ ಗೊತ್ತಾಗಲಿದೆ.
ಮತದಾನೋತ್ತರ ಸಮೀಕ್ಷೆ(ಎಕ್ಸಿಟ್ ಪೋಲ್) ಏನು ಹೇಳಲಿದೆ?
ಅಧಿಕೃತ ಫಲಿತಾಂಶಕ್ಕೂ ಮುನ್ನ ಎಲ್ಲರ ಚಿತ್ತರ ಎಕ್ಸಿಟ್ ಫೋಲ್ನತ್ತ ನೆಟ್ಟಿದೆ. ಬಹುತೇಕ ಎಕ್ಸಿಟ್ ಪೋಲ್ಗಳ ಭವಿಷ್ಯ ನಿಜವಾಗಿರುವುದರಿಂದ ಅದರ ಮೇಲೆ ಜನರ ಗಮನ ಇಮ್ಮಡಿಯಾಗಿದೆ. ಹೀಗಾಗಿ ಎಕ್ಸಿಟ್ ಪೋಲ್ ಬಹಿರಂಗವಾಗಿದ್ದು, ಈ ಬಾರಿಯೂ ಆಪ್ ದೆಹಲಿ ಗದ್ದುಗೆ ಏರಲಿದೆ ಎಂದು ಭವಿಷ್ಯ ನುಡಿದಿವೆ. ಟೈಮ್ಸ್ ನೌ-ಐಪಿಎಸ್ಒಎಸ್ ಜಂಟಿ ಸಮೀಕ್ಷೆಯಲ್ಲಿ ಆಪ್ಗೆ ಬಹುಮತ ದೊರೆಯಲಿದೆ. ಒಟ್ಟು 70 ಸ್ಥಾನದಲ್ಲಿ ಬಹುಮತ ಸಾಬೀತಿಗೆ 36 ಸ್ಥಾನದ ಅವಶ್ಯಕತೆ ಇದ್ದು, ಆಪ್ಗೆ 44 ಮತ್ತು ಬಿಜೆಪಿಗೆ 26 ಸ್ಥಾನ ದೊರೆತರೆ ಕಾಂಗ್ರೆಸ್ ಶೂನ್ಯ ಸಂಪಾದಿಸಲಿದೆ.
ರಿಪಬ್ಲಿಕ್-ಜನ್ ಕಿ ಬಾತ್ ಸಮೀಕ್ಷೆಯ ಪ್ರಕಾರ ಆಪ್ 48 ರಿಂದ 61, ಬಿಜೆಪಿ 9 ರಿಂದ 21 ಹಾಗೂ ಕಾಂಗ್ರೆಸ್ ಒಂದು ಸ್ಥಾನ ಪಡೆಯಲಿದೆ. ನ್ಯೂಸ್ ಎಕ್ಸ್-ಪೋಲ್ಸ್ಟ್ರ್ಯಾಟ್ ಪ್ರಕಾರ ಆಪ್ 55-56, ಬಿಜೆಪಿ 10-14 ಹಾಗೂ ಕಾಂಗ್ರೆಸ್ ಶೂನ್ಯ ಸಂಪಾದಿಸಲಿದೆ. ಇಂಡಿಯಾ ಟಿವಿ ಪ್ರಕಾರ ಆಪ್ 44, ಬಿಜೆಪಿ 26 ಹಾಗೂ ಕಾಂಗ್ರೆಸ್ ಸೊನ್ನೆ ಸುತ್ತಲಿದೆ. (ಏಜೆನ್ಸೀಸ್)