

ನವದೆಹಲಿ: 20 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ಜಾರಿ ನಿರ್ದೇಶನಾಲಯದ (ಇಡಿ) ಸಹಾಯಕ ನಿರ್ದೇಶಕರೊಬ್ಬರನ್ನು ದೆಹಲಿಯಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ.
ಬಂಧಿತ ಜಾರಿ ನಿರ್ದೇಶನಾಲಯದ ಅಧಿಕಾರಿಯನ್ನು ಸಂದೀಪ್ ಸಿಂಗ್ ಯಾದವ್ ಎಂದು ಗುರುತಿಸಲಾಗಿದೆ. ಜ್ಯುವೆಲರಿ ಮಾಲೀಕರೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದಾಗ ಅವರನ್ನು ಬಂಧಿಸಲಾಗಿದೆ. ಇಡಿಯು ಜ್ಯುವೆಲರಿ ಮಾಲೀಕನ ಮಗನ ವಿರುದ್ಧ ದಾಖಲಿಸಿರುವ ಪ್ರಕರಣವೊಂದರಿಂದ ಅವರಿಗೆ ರಿಲೀಫ್ ನೀಡಲು ಇಡಿ ಅಧಿಕಾರಿ ಲಂಚದ ಬೇಡಿಕೆ ಇಟ್ಟಿದ್ದರು ಎಂದು ತಿಳಿದು ಬಂದಿದೆ.
ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಸಿಬಿಐ ಅಧಿಕಾರಿಗಳು ಬಲೆ ಬೀಸಿದ್ದರು. ಈ ವೇಳೆ ಸಂದೀಪ್ ಸಿಂಗ್ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಇಡಿ ಅಧಿಕಾರಿಯನ್ನು ದೆಹಲಿಯ ಲಜಪತ್ ನಗರ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ಸಿಬಿಐ ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‍ಐಆರ್ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.
2023ರ ಆಗಸ್ಟ್ನಲ್ಲಿ ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ದೆಹಲಿಯ ಉದ್ಯಮಿ ಅಮನ್ ಧಲ್ ಅವರನ್ನು ರಕ್ಷಿಸಲು 5 ಕೋಟಿ ರೂ. ಲಂಚ ಪಡೆದಿದ್ದ ಆರೋಪದ ಮೇಲೆ ಇ.ಡಿಯ ಸಹಾಯಕ ನಿರ್ದೇಶಕ ಮತ್ತು ಇತರ ಆರು ಅಧಿಕಾರಿಗಳನ್ನು ಸಿಬಿಐ ಬಂಧಿಸಿತ್ತು.