ಜಗತ್ತಿಗೆ ಭಾರತದ ನಿಲುವು ತಲುಪಿಸಲು ಸಂಸದರ ನಿಯೋಗ

Operation Sindoor
Published on

ಕಾಶ್ಮೀರದ ಪಹಲ್ಗಾಮ್ಲ್ಲಿ ಏಪ್ರಿಲ್ 22ರಂದು ನಡೆದ ಭೀಕರ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ‘ಆಪರೇಷನ್ ಸಿಂಧೂರ’ ಎಂಬ ಹೆಸರಿನಲ್ಲಿ ಪಾಕಿಸ್ತಾನದೊಳಗೆ ಇರುವ ಭಯೋತ್ಪಾದಕ ನೆಲೆಗಳ ಮೇಲೆ ನಿರ್ದಿಷ್ಟ ದಾಳಿಗಳನ್ನು ನಡೆಸಿತು. ಈ ಕಾರ್ಯಾಚರಣೆ ಭಾರತದ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಗಂಭೀರ ವಿಷಯವಾಗಿದ್ದು, ಇದರ ಕುರಿತು ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪಷ್ಟತೆ ನೀಡುವ ಅಗತ್ಯವಿದೆ. ಇದೇ ಕಾರಣಕ್ಕೆ ಜಾಗತಿಕ ಮಟ್ಟದಲ್ಲಿ ಭಾರತದ ನಿಲುವನ್ನು ಸ್ಪಷ್ಟಪಡಿಸಲು ಸರ್ವಪಕ್ಷ ನಿಯೋಗ ಕಳುಹಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಈ ನಿಯೋಗದ ಭಾಗವಾಗಿ ನಾನು ಅಮೆರಿಕ ಒಳಗೊಂಡಂತೆ ವಿವಿಧ ರಾಷ್ಟ್ರಗಳಿಗೆ ಭೇಟಿ ನೀಡುತ್ತಿದ್ದೇನೆ. ನನ್ನ ಪಾಲಿಗೆ ಇದೊಂದು ಮಹತ್ವದ ಕಾರ್ಯ.

ಭಾರತ 1947ರಿಂದ ಭಯೋತ್ಪಾದನೆಯ ಬಲಿಪಶುವಾಗಿದೆ. ಪಾಕಿಸ್ತಾನ ಜನ್ಮತಾಳಿದಾಗಿನಿಂದ ಕಾಶ್ಮೀರದ ಕುರಿತಾಗಿ ಅದರ ನಿಲುವು, ಇಸ್ಲಾಂ ಮೂಲಭೂತವಾದವನ್ನು ತನ್ನ ಠಠಿಚಠಿಛಿ ಟಟ್ಝಜ್ಚಿಢ ಮಾಡಿಕೊಂಡ ಪರಿಣಾಮ ಮಗ್ಗಲುಮುಳ್ಳಾಗಿ ಭಾರತವನ್ನು ತೊಂದರೆಗೀಡು ಮಾಡುತ್ತಲೇ ಬಂದಿದೆ. ಉಗ್ರಗಾಮಿ ಸಂಘಟನೆಗಳಿಗೆ ಸಂಪೂರ್ಣ ಬೆಂಬಲ, ಸಹಕಾರ ನೀಡುವ ಮೂಲಕ ಭಯೋತ್ಪಾದನೆಯ ಶೀತಲ ಸಮರವನ್ನು ಚಾಲ್ತಿಯಲ್ಲಿಟ್ಟಿದೆ. ಇದರಿಂದ ಭಾರತಕ್ಕೆ ಆಗಿರುವ ನಷ್ಟ ಅಷ್ಟಿಷ್ಟಲ್ಲ.

ಭಯೋತ್ಪಾದನೆಯನ್ನೇ ತನ್ನ ಉಸಿರೆಂಬಂತೆ ವರ್ತಿಸುತ್ತಿರುವ ಪಾಕಿಸ್ತಾನ ಇದರಲ್ಲಿ ಕಳೆದುಕೊಳ್ಳುವಂಥದ್ದೇನೂ ಇಲ್ಲ. ಇಡೀ ವಿಶ್ವವು ನೂತನ ತಂತ್ರಜ್ಞಾನ, ಅಭಿವೃದ್ಧಿ, ಜಾಗತಿಕ ಹವಾಮಾನ ಬದಲಾವಣೆಯ ನಿಷ್ಕರ್ಷೆಯಲ್ಲಿ ತೊಡಗಿರುವಾಗ ಪಾಕಿಸ್ತಾನ ಮಾತ್ರ ಹೊಸ ಹೊಸ ಉಗ್ರಗಾಮಿ ಯುನಿವರ್ಸಿಟಿಗಳ ಮೂಲಕ ಭಯೋತ್ಪಾದಕರ ಉತ್ಪಾದನೆಯಲ್ಲಿ ತೊಡಗಿದೆ.

ಇತಿಹಾಸವನ್ನು ಗಮನಿಸಿದರೆ, ಭಾರತ ಯಾವ ಪ್ರದೇಶದ ಮೇಲೂ ಧಾರ್ವಿುಕ ಕಾರಣಗಳಿಗಾಗಿ ದಾಳಿ ನಡೆಸಿರುವ, ಅಮಾಯಕ ಜನರ ಹತ್ಯೆಗೈದು ಸಾಮ್ರಾಜ್ಯ ವಿಸ್ತರಣೆ ಮಾಡಿರುವ ಉದಾಹರಣೆಯೇ ಇಲ್ಲ. ಆದರೆ, ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಾಗ ಸುಮ್ಮನೆ ಕುಳಿತಿಲ್ಲ. ಪಹಲ್ಗಾಮ್ಲ್ಲಿ ಧಾರ್ವಿುಕ ಕಾರಣಗಳನ್ನೇ ಮುಂದಿಟ್ಟುಕೊಂಡು ಅಮಾಯಕ ಪ್ರವಾಸಿಗರ ದಾರುಣ ಹತ್ಯೆ ಮಾಡಿದ್ದನ್ನು ನಾಗರಿಕ ಸಮಾಜ ಒಪ್ಪುವುದಿಲ್ಲ. ನಮ್ಮ ಹೆಣ್ಣುಮಕ್ಕಳ ಸಿಂಧೂರ ಅಳಿಸಿರುವ ಕ್ರೂರ ಕೃತ್ಯಕ್ಕೆ ತಕ್ಕ ಶಾಸ್ತಿ ಮಾಡಲು ಆಪರೇಶನ್ ಸಿಂಧೂರ ಮೂಲಕ ಉಗ್ರಗಾಮಿಗಳನ್ನು ಹೊಡೆದುರಳಿಸಲಾಗಿದೆ.

ಇದೆಲ್ಲದರ ಜತೆ ಭಾರತ ‘ಉಗ್ರಗಾಮಿ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ’ ಎಂಬ ಸಂದೇಶ ನೀಡಿದೆ. ಆಪರೇಶನ್ ಸಿಂಧೂರ ಭಾರತದ ಮಿಲಿಟರಿ ಪ್ರಾಬಲ್ಯದ ಬಗ್ಗೆ ಅರಿವು ಮೂಡಿಸಿದೆ. ಭಾರತದ ಸಾರ್ವಭೌಮತ್ವದ ಮೇಲೆ ದಾಳಿ ಮಾಡುವವರು ಇನ್ನುಮುಂದೆ ನೆಮ್ಮದಿಯ ಜೀವನ ನಡೆಸಲು ಸಾಧ್ಯವಿಲ್ಲ ಎಂಬುದನ್ನು ವಿಶ್ವಕ್ಕೆ ತಿಳಿಸುವ ಉದ್ದೇಶದಿಂದ, ಪಾಕಿಸ್ತಾನದ ನೇರ ಕುಮ್ಮಕ್ಕು, ಭಾರತದ ನಿಲುವುಗಳನ್ನು ವಿಶ್ವದ ವಿವಿಧ ವೇದಿಕೆಗಳಲ್ಲಿ ಪ್ರಚುರಪಡಿಸಲು ಕೇಂದ್ರ ಸರ್ಕಾರ ಸರ್ವಪಕ್ಷಗಳ ನಿಯೋಗವನ್ನು ಅನೇಕ ರಾಷ್ಟ್ರಗಳಿಗೆ ಕಳುಹಿಸುತ್ತಿದೆ.

ಇದೆಲ್ಲ ಒಂದೆಡೆಯಾದರೆ ಆಪರೇಶನ್ ಸಿಂಧೂರ, ಪಹಲ್ಗಾಮ್ ಕೃತ್ಯ, ಭಯೋತ್ಪಾದನೆ ಕುರಿತಾಗಿ ತನ್ನ ಬಗ್ಗೆ ಸಿಂಪಥಿ ಹೊಂದಿರುವ ಮೂಲಗಳ ಮುಖಾಂತರ ಜಾಗತಿಕವಾಗಿ ತಪ್ಪು ಸಂದೇಶಗಳನ್ನು ಬಿತ್ತರಿಸುವ ಕಾರ್ಯದಲ್ಲಿ ಪಾಕಿಸ್ತಾನ ನಿರತವಾಗಿದೆ. ಭಾರತದ ದಾಳಿಗೆ ಮಣ್ಣು ಮುಕ್ಕಿದ್ದರೂ, ತನ್ನ ವೈಫಲ್ಯವನ್ನು ಮರೆಮಾಚಲು ದೊಡ್ಡ ಫೇಕ್ ಕ್ಯಾಂಪೇನನ್ನೇ ಶುರು ಮಾಡಿದೆ. ಸಂಪೂರ್ಣ ಫೇಲ್ ಆಗಿರುವ ಜನರಲ್ ಅಸೀಮ್ ಮುನೀರ್​ನನ್ನು ಫೀಲ್ಡ್ ಮಾರ್ಷಲ್ ಹುದ್ದೆಗೆ ನೇಮಕ ಮಾಡುವ ಮೂಲಕ ಸೋಲನ್ನು ಕೂಡ ಪಾಕ್ ವಿಜೃಂಭಿಸುತ್ತಿರುವುದು ನಿಜಕ್ಕೂ ಸೋಜಿಗ. ಪಾಕಿಸ್ತಾನದ ಕುಕೃತ್ಯಗಳನ್ನು ಜಿ -7, ಜಿ -20, ವಿಶ್ವಸಂಸ್ಥೆ ಭದ್ರತಾ ಮಂಡಳಿ, ವಿಶ್ವದ ಪ್ರಮುಖ ದೇಶಗಳು, ನಾಯಕರು ಇರುವ ವೇದಿಕೆಗಳಲ್ಲಿ ವಿವರಿಸುವ ಮೂಲಕ ಈ ಸರ್ವಪಕ್ಷ ನಿಯೋಗವು ಭಾರತದ ಪ್ರಬಲ ನಿಲುವನ್ನು ತಿಳಿಸಲಿದೆ.

ಭಾರತದೊಂದಿಗೆ ಸಮಾನಾಂತರವಾಗಿ ಪಾಕಿಸ್ತಾನವನ್ನು ನೋಡುವುದು ಅಸಾಧ್ಯ. ಎಲ್ಲ ರಂಗಗಳಲ್ಲಿಯೂ ಭಾರತ ಮುಂದಿದೆ. ಭಾರತದೊಂದಿಗಿನ ವ್ಯಾಪಾರ, ವ್ಯವಹಾರ,ತಂತ್ರಜ್ಞಾನ, ವಿಜ್ಞಾನ, ಬಾಹ್ಯಾಕಾಶ ಕ್ಷೇತ್ರದ ಪಾಲುದಾರಿಕೆ ಜಗತ್ತಿನ ಪ್ರಗತಿಗೆ ಪೂರಕ. ಅದೇ ಪಾಕಿಸ್ತಾನ ದೊಂದಿಗಿನ ನಂಟು, ಅಭಿವೃದ್ಧಿಯ ಹಿನ್ನಡೆ, ಭಯೋತ್ಪಾದನೆಗೆ ಪ್ರೇರಣೆ. ಭಾರತ ಯುವ, ಉತ್ಸಾಹಿ ಪಡೆಯೊಂದಿಗೆ ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ನಿರತವಾದರೆ, ಪಾಕಿಸ್ತಾನ ತನ್ನ ಯುವ ಸಮೂಹವನ್ನು ಉಗ್ರಗಾಮಿ ಕೃತ್ಯಗಳಿಗೆ ದೂಡುತ್ತಿದೆ. ಭಾರತದ ಪ್ರಜಾಪ್ರಭುತ್ವದಲ್ಲಿ ಸಮಗ್ರ ಅಭಿವೃದ್ಧಿಗೆ ಪೂರಕವಾದ ವಾತಾವರಣವಿದ್ದರೆ, ಪಾಕಿಸ್ತಾನದಲ್ಲಿ ತದ್ವಿರುದ್ಧ ಸ್ಥಿತಿ ಇದೆ.

ಭಾರತ ಭವಿಷ್ಯದ ಕಡೆಗೆ ಮುಖ ಮಾಡಿದೆ. ನಮ್ಮ ನಿಯೋಗ ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಿಗೆ ತೆರಳಿ ಭಾರತದ ನಿಲುವು, ಪಾಕಿಸ್ತಾನದ ಮುಖವಾಡವನ್ನು ಬಯಲು ಮಾಡುವ ಕಾರ್ಯದಲ್ಲಿ ನಿರತವಾಗಲಿದೆ. ನ್ಯೂಯಾರ್ಕ್​ನಲ್ಲಿ ಮೊದಲು 9/11 ಸ್ಮಾರಕಕ್ಕೆ ತೆರಳಿ, ನಮನ ಸಲ್ಲಿಸುವ ಮೂಲಕ ಸರ್ವಪಕ್ಷ ನಿಯೋಗ ಸೌತ್ ಅಮೆರಿಕಕ್ಕೆ ಭೇಟಿ ನೀಡಲಿದೆ. ಪನಾಮ, ಗಯಾನ, ಕೊಲಂಬಿಯಾ, ನಂತರ ಅಮೆರಿಕಕ್ಕೆ ಭೇಟಿ ನೀಡಿ ವಿವಿಧ ನಾಯಕರು, ಥಿಂಕ್​ಟ್ಯಾಂಕ್, ಮಾಧ್ಯಮ ಪ್ರಮುಖರು, ನಿಯೋಗಗಳನ್ನು ಭೇಟಿಯಾಗಿ ಭಾರತದ ನಿಲುವನ್ನು ತಿಳಿಸಲಿದೆ.

ಸರ್ವಪಕ್ಷ ನಿಯೋಗದ ಕಾರ್ಯ: 1947ರಿಂದಲೂ ಪಾಕಿಸ್ತಾನ, ಭಾರತದ ಪ್ರಜೆಗಳ ಮೇಲೆ ಪರೋಕ್ಷ ಯುದ್ಧದ ಮೂಲಕ ಭಯೋತ್ಪಾದನೆಯನ್ನು ಹೇರಿದೆ. ಭಾರತೀಯ ನಾಗರಿಕರ ಹತ್ಯೆಯನ್ನು ಸಂಭ್ರಮಿಸುವ, ಈ ಕೃತ್ಯಕ್ಕೆ ಸಹಕರಿಸುವ ಪಾಕಿಸ್ತಾನಿ ಜನರಲ್​ಗಳು, ಐಎಸ್​ಐ, ಸರ್ಕಾರದ ಮುಖವಾಡವನ್ನು ವಿಶ್ವದೆದುರು ತೆರೆದಿಡುವ ಅವಶ್ಯಕತೆ ಇದೆ.

ಆಪರೇಷನ್ ಸಿಂಧೂರ ನಂತರ, ಪಾಕಿಸ್ತಾನವು ಭಾರತದ ವಿರುದ್ಧ ಅಪಪ್ರಚಾರ ಮಾಡಲಾರಂಭಿಸಿತು. ಇದು ಜಾಗತಿಕವಾಗಿ ತಪ್ಪು ತಿಳಿವಳಿಕೆಗೆ ಕಾರಣವಾಗಬಹುದು. ಇಂತಹ ಸಂದರ್ಭದಲ್ಲಿ, ಭಾರತ ತನ್ನ ನಿಲುವನ್ನು ಸ್ಪಷ್ಟಪಡಿಸುವುದು, ಭಯೋತ್ಪಾದನೆ ವಿರುದ್ಧದ ತನ್ನ ಹೋರಾಟದ ನ್ಯಾಯಸಮ್ಮತತೆಯನ್ನು ವಿವರಿಸುವುದು ಮತ್ತು ಅಂತಾರಾಷ್ಟ್ರೀಯ ಸಮುದಾಯದ ಬೆಂಬಲ ಪಡೆಯುವುದು ಅವಶ್ಯವಾಗಿದೆ. ಇದಕ್ಕಾಗಿ ಸರ್ವಪಕ್ಷ ನಿಯೋಗ ಮಹತ್ವದ ಹೆಜ್ಜೆಯಾಗಿದೆ.

ಭಾರತದ ನಿಲುವಿನ ಸ್ಪಷ್ಟೀಕರಣ: ಈ ನಿಯೋಗ ವಿಶ್ವದ ವಿವಿಧ ದೇಶಗಳ ನಾಯಕರು, ರಾಜತಾಂತ್ರಿಕರು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಭೆ ನಡೆಸಿ, ಪಹಲ್ಗಾಮ್ ದಾಳಿಯ ತೀವ್ರತೆ, ಆಪರೇಷನ್ ಸಿಂಧೂರ್ ನಡೆಸಲು ಕಾರಣವಾದ ಸನ್ನಿವೇಶಗಳು, ಭಾರತದ ಕ್ರಮಗಳು ಕೇವಲ ಭಯೋತ್ಪಾದನೆ ವಿರುದ್ಧದ ರಕ್ಷಣಾತ್ಮಕ ನಡೆ ಎಂಬುದನ್ನು ವಿವರಿಸುತ್ತದೆ.

ಉಗ್ರರಿಗೆ ಬೆಂಬಲ ತಡೆಯುವುದು: ಪಾಕಿಸ್ತಾನವು ಭಯೋತ್ಪಾದನೆಯನ್ನು ಬೆಂಬಲಿಸುತ್ತಿದೆ ಎಂಬುದಕ್ಕೆ ಪುರಾವೆಗಳನ್ನು ಪ್ರಸ್ತುತಪಡಿಸುವ ಮೂಲಕ, ಭಯೋತ್ಪಾದಕ ಗುಂಪುಗಳಿಗೆ ಯಾವುದೇ ದೇಶದಿಂದ ಸಿಗುವ ಬೆಂಬಲವನ್ನು ತಡೆಯಲು ನಿಯೋಗ ಪ್ರಯತ್ನಿಸುತ್ತದೆ. ಅಂತಾರಾಷ್ಟ್ರೀಯ ಭಯೋತ್ಪಾದನೆಗೆ ಹಣ ಒದಗಿಸುವುದನ್ನು ನಿಲ್ಲಿಸಲು ಮತ್ತು ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಲು ಜಾಗತಿಕ ಸಮುದಾಯದ ಮೇಲೆ ಒತ್ತಡ ಹೇರುವ ಅವಶ್ಯಕತೆ ಇದೆ.

ನಂಬಿಕೆ, ವಿಶ್ವಾಸಾರ್ಹತೆ ಹೆಚ್ಚಿಸುವುದು: ಆಪರೇಷನ್ ಸಿಂಧೂರ ಕುರಿತು ಪಾಕಿಸ್ತಾನ ಹರಡುತ್ತಿರುವ ಸುಳ್ಳು ಸುದ್ದಿಗಳು ಮತ್ತು ಅಪಪ್ರಚಾರವನ್ನು ನಿರಾಕರಿಸುವ ಮೂಲಕ, ಭಾರತದ ನಿಲುವು ಪಾರದರ್ಶಕ ಮತ್ತು ವಿಶ್ವಾಸಾರ್ಹವಾಗಿದೆ ಎಂದು ನಿಯೋಗ ಪ್ರಸ್ತುತಪಡಿಸುತ್ತದೆ. ಇದು ಭಾರತದ ಜಾಗತಿಕ ವರ್ಚಸ್ಸನ್ನು ಹೆಚ್ಚಿಸುತ್ತದೆ.

ಭಾರತದ ಏಕತೆ ಪ್ರದರ್ಶನ: ಸರ್ವಪಕ್ಷ ನಿಯೋಗವು ವಿಭಿನ್ನ ರಾಜಕೀಯ ಪಕ್ಷಗಳ ಸದಸ್ಯರನ್ನು ಒಳಗೊಂಡಿರುವುದರಿಂದ, ಇದು ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಭಾರತ ಪಕ್ಷಾತೀತವಾಗಿ ಒಂದಾಗಿದೆ ಎಂದು ಜಗತ್ತಿಗೆ ತೋರಿಸುತ್ತದೆ.

ದೀರ್ಘಾವಧಿ ಪರಿಹಾರ ಕುರಿತು ಚರ್ಚೆ: ಭಯೋತ್ಪಾದನೆಯ ಮೂಲ ವನ್ನು ನಿಮೂಲನೆ ಮಾಡಲು ಮತ್ತು ಪ್ರಾದೇಶಿಕ ಶಾಂತಿ-ಸ್ಥಿರತೆ ಕಾಪಾಡಲು ಅಗತ್ಯವಿರುವ ದೀರ್ಘಾವಧಿ ಪರಿಹಾರಗಳ ಬಗ್ಗೆ ಅಂತಾ ರಾಷ್ಟ್ರೀಯ ಸಮುದಾಯದೊಂದಿಗೆ ನಿಯೋಗ ಚರ್ಚೆ ನಡೆಸುತ್ತದೆ.

(ಲೇಖಕರು ಬೆಂಗಳೂರು ದಕ್ಷಿಣ ಸಂಸದರು,

ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net